ಕೊಡಗು : 212 ಲಕ್ಷ ರೂ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಅಪ್ಪಚ್ಚು ರಂಜನ್ ಚಾಲನೆ

Prasthutha|

ಮಡಿಕೇರಿ: ನಗರಸಭೆ ವ್ಯಾಪ್ತಿಯ ಎಸ್ ಎಫ್ ಸಿ 14 ಮತ್ತು 15 ನೇ ಹಣಕಾಸು ಆಯೋಗದ ಅನುದಾನದಡಿ ಸುಮಾರು 212.94 ಲಕ್ಷ ರೂಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಗುದ್ದಲಿ ಪೂಜೆಯನ್ನು ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ಮಂಗಳವಾರ ನೆರವೇರಿಸಿದರು.    

- Advertisement -

ನಗರದ ಇಂದಿರಾ ಕ್ಯಾಂಟಿನ್ ಬಳಿ ಮಳೆ ನೀರು ಚರಂಡಿ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲಿ ಎಸ್ ಎಫ್ ಸಿ ಮತ್ತು 14 ಮತ್ತು 15 ನೇ ಹಣಕಾಸು ಆಯೋಗದ ಅನುದಾನ ಸೇರಿದಂತೆ ಒಟ್ಟು 212.94 ಲಕ್ಷ ರೂ.ಗಳ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಂದರು. 

ಸುಮಾರು 111.92 ಲಕ್ಷ ರೂ.ಗಳ ವಿವಿಧ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಲಾಗಿದೆ. ಸುಮಾರು 37.94 ಲಕ್ಷ ರೂ.ಗಳ ಕಾಮಗಾರಿ ಉದ್ಘಾಟಿಸಲಾಗಿದೆ. ಹಾಗೆಯೇ 63.08 ಲಕ್ಷ ರೂ.ಗಳ ಕಾಮಗಾರಿ ಈಗಾಗಲೇ ಪ್ರಾರಂಭಿಸಲಾಗಿದೆ ಎಂದು ಎಂ.ಪಿ.ಅಪ್ಪಚ್ಚುರಂಜನ್ ಅವರು ಹೇಳಿದರು. 

- Advertisement -

ಶಾಸಕರ ಕ್ಷೇತ್ರ ಅಭಿವೃದ್ಧಿಗೆ ಸರ್ಕಾರ 50 ಕೋಟಿ ರೂ. ಬಿಡುಗಡೆ ಮಾಡಿದ್ದು, ಇದರಲ್ಲಿ ಲೋಕೋಪಯೋಗಿ ಇಲಾಖೆಗೆ 20 ಕೋಟಿ ರೂ., ಪಂಚಾಯತ್ ರಾಜ್ ಇಲಾಖೆಗೆ 20 ಕೋಟಿ ರೂ., ನಗರಸಭೆ 5 ಕೋಟಿ ರೂ. ಹಾಗೂ ಕುಶಾಲನಗರ ಪುರಸಭೆ ಮತ್ತು ಸೋಮವಾರಪೇಟೆ ಪ.ಪಂ.ಗೆ ಒಟ್ಟು 5 ಕೋಟಿ ರೂ. ಬಿಡುಗಡೆ ಮಾಡಲಾಗುವುದು. ಈ ಸಂಬಂಧ ಕ್ರಿಯಾ ಯೋಜನೆ ತಯಾರಿಸಲು ನಿರ್ದೇಶನ ನೀಡಲಾಗಿದೆ ಎಂದು ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ಹೇಳಿದರು.

ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಗ್ರಾಮೀಣ, ನಗರ, ಪಟ್ಟಣ ಪ್ರದೇಶದ ರಸ್ತೆಗಳನ್ನು ಸರ್ವ ಋತು ರಸ್ತೆಗಳನ್ನಾಗಿ ಮಾಡುವ ನಿಟ್ಟಿನಲ್ಲಿ ಶ್ರಮಿಸಲಾಗುತ್ತಿದೆ ಎಂದು ಶಾಸಕರು ಹೇಳಿದರು. 

ಮಡಿಕೇರಿ ನಗರಸಭಾ ವ್ಯಾಪ್ತಿಯ ರಾಜಶೇಖರ ಹೋಂಮೇಡ್ಸ್ ಹಿಂಬದಿ ರಸ್ತೆಯಿಂದ ಗಣಪತಿ ದೇವಸ್ಥಾನದವರೆಗೆ ರಸ್ತೆ ಮರು ಡಾಂಬರೀಕರಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು.

ಕನ್ನಂಡಬಾಣೆ, ಪಂಪ್‍ಹೌಸ್ ನಿರ್ಮಾಣ ಕಾಮಗಾರಿ, ಕನ್ನಂಡಬಾಣೆ ಹೊಸ ಪಂಪ್‍ ಹೌಸ್‍ ನಲ್ಲಿ ಪ್ಯಾನಲ್ ಬೋರ್ಡ್ ಮತ್ತು ಸ್ಟಾರ್ಟರ್ ಅಳವಡಿಸಿ ಮೋಟಾರ್ ಪಂಪ್ ಅಳವಡಿಸುವ ಕಾಮಗಾರಿ, ಕನ್ನಂಡಬಾಣೆ ಹೊಸ ಪಂಪ್‍ ಹೌಸ್‍ ನಲ್ಲಿ ಪ್ಯಾನಲ್ ಬೋರ್ಡ್ ಅಳವಡಿಸಿ ಮೋಟಾರ್ ಪಂಪ್ ಸ್ಥಳಾಂತರಿಸುವ ಕಾಮಗಾರಿ ಉದ್ಘಾಟಿಸಿದರು.

ತುಳಸಿ ಭವನ ಹಿಂಭಾಗ, ಕನ್ನಂಡಬಾಣೆಗೆ ಹೋಗುವ ರಸ್ತೆಯಲ್ಲಿ ಡಾ.ರವಿಕಿರಣ್ ಮನೆ ಹತ್ತಿರ ಚರಂಡಿ ಹಾಗೂ ಕಲ್ವರ್ಟ್ ನಿರ್ಮಾಣ, ಅಬ್ದುಲ್ ಕಲಾಂ ಲೇ ಔಟ್‍ ನಲ್ಲಿ ಆಸಿಫ್ ರವರ ಮನೆಯಿಂದ ಫರೀದ್‍ ರವರ ಮನೆಯವರೆಗೆ ಚರಂಡಿ ನಿರ್ಮಾಣ ಕಾಮಗಾರಿ, ಸ್ಟೀವರ್ಟ್ ಹಿಲ್ ಬಳಿಯ ತುಳಿಸಿ ಮನೆ ಮುಂಭಾಗ ಚರಂಡಿ ನಿರ್ಮಾಣ ಮತ್ತು ತ್ಯಾಗರಾಜ ಮುಖ್ಯ ರಸ್ತೆಯ ಅಯ್ಯಪ್ಪ ಅವರ ಮನೆ ಮುಂಭಾಗ ಕಲ್ವ್ವರ್ಟ್ ನಿರ್ಮಾಣ ಕಾಮಗಾರಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು.



Join Whatsapp