ಬೋಳಿಯಾರು: ಇಬ್ಬರಿಗೆ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಆರು ಮಂದಿಯನ್ನು ಬಂಧಿಸಲಾಗಿದೆ. ಮೆರವಣಿಗೆ ನಡೆಸಿದವರು ಪ್ರಚೋದನಾಕಾರಿ ಘೋಷಣೆ ಮಾಡಿರುವುದು ಮುಖ್ಯ ಕಾರಣವಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಹೇಳಿದ್ದಾರೆ.
ಮಂಗಳೂರು ನಗರ ಪೊಲೀಸ್ ಕಮೀಷನರ್ ಅನುಪಮ್ ಅಗರ್ ವಾಲ್ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ಪ್ರಕರಣಕ್ಕೆ ಸಂಬಂಧಿಸಿ ಒಟ್ಟು ಆರು ಮಂದಿಯನ್ನು ಬಂಧಿಸಿದ್ದೇವೆ. ಮೂರು ತಂಡದ ಮೂಲಕ ತನಿಖೆ ನಡೆಯುತ್ತಿದ್ದು, ಇನ್ನುಳಿದವರ ಬಂಧನ ಪ್ರಕ್ರಿಯೆ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಭಾರತ್ ಮಾತಾಕಿ ಜೈ ಎಂಬ ಘೋಷಣೆಯಿಂದ ಪ್ರಚೋದನೆಗೊಂಡಿಲ್ಲ. ಬದಲಾಗಿ ಇದಕ್ಕೂ ಮೊದಲು ಮೆರವಣಿಗೆಯಲ್ಲಿ ಆಟೋ ನಿಲ್ದಾಣದ ಸಮೀಪ ಪಾಕಿಸ್ತಾನವನ್ನು ಉಲ್ಲೇಖಿಸಿ ಆಕ್ಷೇಪಾರ್ಹ ಘೋಷಣೆಯನ್ನು ಕೂಗಿದ್ದಾರೆ ಇದು ಸೋಶಿಯಲ್ ಮೀಡಿಯಾದ ಮೂಲಕ ಸಮುದಾಯದವರಿಗೆ ತಲುಪಿದೆ. ಇದರಿಂದ ಕೆಲವರು ಈ ಕೃತ್ಯ ನಡೆಸಿದ್ದಾರೆ. ಈ ಬಗ್ಗೆಯೂ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದರು.
ಮುಂದಿನ ದಿನಗಳಲ್ಲಿ ಎಲ್ಲಾ ಠಾಣೆಗಳಲ್ಲಿ, ಎಲ್ಲ ಧರ್ಮದ ಪ್ರಮುಖರನ್ನು ಕರೆದು ಶಾಂತಿ ಸಭೆ ನಡೆಸುತ್ತೇವೆ. ಸಾಮಾಜಿಕ ಜಾಲತಾಣಗಳ ಮೇಲೂ ನಿಗಾ ಇರಿಸಿದ್ದೇವೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಹೇಳಿದರು.
ಬೋಳಿಯಾರ್ ನಲ್ಲಿ ನಡೆದ ಚೂರಿ ಇರಿತ ಘಟನೆಯ ಹಿನ್ನೆಲೆಯಲ್ಲಿ ಗಸ್ತು ಕಾರ್ಯ ಬಿಗಿಗೊಳಿಸಲಾಗಿದೆ. ವಾಹನಗಳಲ್ಲಿ ಸಂಚರಿಸುವವರನ್ನು ಪಾಕೆಟ್ ಚೂರಿ ಸೇರಿದಂತೆ ಶಸ್ತ್ರಾಸ್ತ್ರಗಳನ್ನು ಹೊಂದಿರುವ ಬಗ್ಗೆ ತಪಾಸಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದರು.