►ಮಾನವ ವಿರೋಧಿ ಕಾನೂನು AFSPA ರದ್ದುಪಡಿಸಲು ಸಕಾಲ
ಟ್ರಕ್ಕಿನಲ್ಲಿ ಸಾಗುತ್ತಿದ್ದ ಕಾರ್ಮಿಕರ ಮೇಲೆ ಭಾರತೀಯ ಅರೆ ಸೇನಾಪಡೆ ಅಸ್ಸಾಂ ರೈಫಲ್ಸ್ ಗುಂಡು ಹಾರಿಸಿ ಕೊಂದು ಹಾಕಿದ ಘಟನೆಯ ನಂತರ ಸ್ಥಳೀಯ ಬುಡಕಟ್ಟು ಜನಾಂಗದವರು ಮತ್ತು ಅರೆಸೇನಾಪಡೆ ನಡುವೆ ನಡೆದ ಘರ್ಷಣೆಯಲ್ಲಿ ಓರ್ವ ಯೋಧ ಸೇರಿದಂತೆ ಕನಿಷ್ಠ 16 ಮಂದಿ ಮೃತಪಟ್ಟ ಘಟನೆ ನಾಗಾಲ್ಯಾಂಡ್ ನ ಮೊನ್ ಜಿಲ್ಲೆಯ ತಿರುಹಳ್ಳಿಯಲ್ಲಿ ನಡೆದಿರುವುದು ಈಶಾನ್ಯ ರಾಜ್ಯಗಳಲ್ಲಿ ಶಾಂತಿ ಸ್ಥಾಪನೆಯ ಪ್ರಕ್ರಿಯೆಗೆ ಹಿನ್ನಡೆಯಾಗಿದೆ.
ಮ್ಯಾಯನ್ಮಾರ್ (ಬರ್ಮಾ) ಗಡಿ ಪ್ರದೇಶದ ಮೊರ್ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಉಗ್ರಗಾಮಿಗಳ ಸಂಚಾರ ಇದೆ ಎಂಬ ಸುಳ್ಳು ಮಾಹಿತಿ ಮೇರೆಗೆ ಹೊಂಚು ಹಾಕಿ ಕುಳಿತ್ತಿದ್ದ ಅಸ್ಸಾಂ ರೈಫಲ್ಸ್ ಯೋಧರು ಟ್ರಕ್ಕಿನಲ್ಲಿ ಸಾಗುತ್ತಿದ್ದ ಕಾರ್ಮಿಕರ ಮೇಲೆ ಅಪ್ರಚೋದಿತರಾಗಿ ಗುಂಡುಹಾರಿಸಿದ್ದಾರೆ. ಇದರಿಂದಾಗಿ ಆರು ಮಂದಿ ಸ್ಥಳೀಯ ಕಾರ್ಮಿಕರು ಸತ್ತಿದ್ದಾರೆ. ಅರೆಸೇನಾ ಪಡೆ ಯೋಧರು ಈ ಘಟನೆಯನ್ನು ಮುಚ್ಚಿ ಹಾಕುವ ಯತ್ನ ನಡೆಸಿರುವುದನ್ನು ಸ್ಥಳೀಯರು ಮತ್ತು ಪೊಲೀಸರು ಖಚಿತಪಡಿಸಿದ್ದಾರೆ.
ಘಟನೆಯಿಂದ ಆಕ್ರೋಶಗೊಂಡ ಸ್ಥಳೀಯರು ಯೋಧರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದು, ಓರ್ವ ಯೋಧ ಸಾವನ್ನಪ್ಪಿದ್ದು, ಆರು ಮಂದಿ ಸೇರಿದಂತೆ, ಸ್ಥಳೀಯರು ಕೂಡ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ನಾಗಾಲ್ಯಾಂಡ್‌ನಲ್ಲಿ ಒಟ್ಟಾರೆಯಾಗಿ 16 ಮಂದಿ ಅಮಾಯಕ ನಾಗರಿಕರನ್ನು ಕೊಂದು ಹಾಕಲಾಗಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಇದೊಂದು ತಪ್ಪುಗ್ರಹಿಕೆಯಿಂದಾದ ಪ್ರಮಾದ ಎಂದು ಒಪ್ಪಿಕೊಂಡಿದ್ದು, ಪ್ರಮಾದಕ್ಕಾಗಿ ವಿಷಾದ ವ್ಯಕ್ತಪಡಿಸಿದ್ದಾರೆ. ನಾಗಾಲ್ಯಾಂಡ್ ಹತ್ಯೆ ತಪ್ಪಾದ ಗುರುತಿನ ಪ್ರಕರಣ ಎಂದು ಸಂಸತ್‌ನಲ್ಲಿ ಗೃಹ ಸಚಿವ ಅಮಿತ್ ಶಾ ಅಧಿಕೃತ ಹೇಳಿಕೆ ನೀಡಿದ್ದಾರೆ. ಭಾರತೀಯ ಸೇನಾ ವಕ್ತಾರರು ಕೂಡ ನಾಗರಿಕರು ಮತ್ತು ಸೇನಾಪಡೆಗಳ ನಡುವೆ ನಡೆದ ಘರ್ಷಣೆಯಲ್ಲಿ 16 ಮಂದಿ ನಾಗರಿಕರು ಮೃತಪಟ್ಟಿರುವುದು ದುರದೃಷ್ಟಕರ ಎಂದು ಹೇಳಿದ್ದಾರೆ.
ಹಾರ್ನ್ ಬಿಲ್ ಉತ್ಸವ ರದ್ದು
ಭದ್ರತಾ ಪಡೆಗಳು 16 ನಾಗರಿಕರನ್ನು ಗುಂಡಿಕ್ಕಿ ಹತ್ಯೆ ಮಾಡಿರುವುದನ್ನು ವಿರೋಧಿಸಿ ಪ್ರತಿವರ್ಷ ನಡೆಯುವ ಪ್ರಖ್ಯಾತ ಹಾರ್ನ್ ಬಿಲ್ ಉತ್ಸವವನ್ನು ರದ್ದುಗೊಳಿಸಲು ನಾಗಾಲ್ಯಾಂಡ್ ಮುಖ್ಯಮಂತ್ರಿ ನೆಫಿಯು ರಿಯೊ ಅವರ ನೇತೃತ್ವದ ಸಚಿವ ಸಂಪುಟ ನಿರ್ಣಯ ಕೈಗೊಂಡಿದ್ದು, ಉತ್ಸವ ರದ್ದಾಗಿದೆ.
ಅಲ್ಲದೆ ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರ) ಕಾಯ್ದೆಯನ್ನು ಹಿಂಪಡೆಯುವ ಒತ್ತಾಯಕ್ಕೆ ಇನ್ನಷ್ಟು ಬಲಬಂದಿದ್ದು, ಈಶಾನ್ಯ ರಾಜ್ಯಗಳ ಸರಕಾರಗಳು ಕೇಂದ್ರಕ್ಕೆ ಪತ್ರ ಬರೆಯಲು ಮುಂದಾಗಿವೆ.
ನಾಗಲ್ಯಾಂಡ್ ರಾಜ್ಯದ ರಾಜಧಾನಿ ಸಮೀಪದ ಕಿಸಾಮಾದ ನಾಗಾ ಹೆರಿಟೇಜ್ ವಿಲೇಜ್ ನಲ್ಲಿ ನಡೆಯುತ್ತಿರುವ ರಾಜ್ಯದ ಅತಿದೊಡ್ಡ ಪ್ರವಾಸೋದ್ಯಮ ಮಹೋತ್ಸವ ಹಾರ್ನ್ ಬಿಲ್ ಉತ್ಸವನ್ನು ರಾಜ್ಯ ಸರಕಾರ ರದ್ದು ಮಾಡಿದೆ. 10 ದಿನಗಳ ಕಾಲ ನಡೆಯುವ ಹಾರ್ನ್ ಬಿಲ್ ಉತ್ಸವವು ಡಿಸೆಂಬರ್ 10ರಂದು ಕೊನೆಗೊಳ್ಳಬೇಕಿತ್ತು. ಆದರೆ ನಾಗರಿಕರ ಹತ್ಯೆ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಸಹ ರಾಜ್ಯ ಸರ್ಕಾರ ರದ್ದುಗೊಳಿಸಿದೆ.
ಮೋನ್ ಜಿಲ್ಲೆಯಲ್ಲಿ ನಡೆದ ನಾಗರಿಕರ ಹತ್ಯೆಯ ನಂತರ ಪೂರ್ವ ನಾಗಾಲ್ಯಾಂಡ್ ಮತ್ತು ರಾಜ್ಯದ ಇತರ ಭಾಗಗಳ ಹಲವಾರು ಬುಡಕಟ್ಟುಗಳು ತಮ್ಮ ತಮ್ಮ ಮೊರುಂಗ್ ಗಳಲ್ಲಿ ಎಲ್ಲಾ ಚಟುವಟಿಕೆಗಳನ್ನು ಸ್ಥಗಿತಗೊಳಿಸಿ ಪ್ರತಿಭಟನೆಯನ್ನು ಸೂಚಿಸಿವೆ.
ಮೋನ್ ಜಿಲ್ಲೆಯ ಟಿರು ಮತ್ತು ಒಟಿಂಗ್ ನಲ್ಲಿ ಸೈನಿಕರ ಗುಂಡಿಗೆ ನಿರಾಯುಧ ಗ್ರಾಮಸ್ಥರು ಬಲಿಯಾದ ನಂತರ ಸೇನೆಯ ವಿಶೇಷಾಧಿಕಾರ ರದ್ದು ಮಾಡಿ ಎಂಬ ಕೂಗು ಮತ್ತೆ ಮುನ್ನೆಲೆಗೆ ಬಂದಿದೆ.
ಈಶಾನ್ಯದ ಕೆಲವು ರಾಜ್ಯಗಳಲ್ಲಿ ಈ ಕರಾಳ ಮತ್ತು ಮಾನವ ಹಕ್ಕುಗಳ ದಮನಕಾರಿಯಾದ ಭಾರತೀಯ ಸೇನಾ ಪಡೆಗಳ ವಿಶೇಷಾಧಿಕಾರ ಕಾಯಿದೆ ಜಾರಿಯಲ್ಲಿದೆ. ಮಣಿಪುರ ರಾಜ್ಯದಲ್ಲಿ ಇರೋಮ್ ಚಾನು ಶರ್ಮಿಳಾ ಅವರು ಹತ್ತಿರ ಹತ್ತಿರ ಎರಡು ದಶಕಗಳ ಕಾಲ ಈ ಕರಾಳ ಕಾಯಿದೆಯ ವಿರುದ್ಧ ಉಪವಾಸ ಹೋರಾಟ ನಡೆಸಿದ್ದರು. ಸರಕಾರ ಅವರ ವಿರುದ್ಧ ಆತ್ಮಹತ್ಯಾ ಯತ್ನ ಕೇಸು ದಾಖಲಿಸಿದಲ್ಲದೆ, ಮೂಗಿನ ಮೂಲಕ ಪೈಪ್ ಹಾಕಿ ಅವರಿಗೆ ದ್ರವಾಹಾರ ಪೂರೈಸುವ ಮೂಲಕ ಅವರ ಹೋರಾಟವನ್ನು ಹಿಮ್ಮೆಟ್ಟಿಸಲು ಯತ್ನಿಸಿತ್ತು.
ನಾಗರಿಕ ಹಕ್ಕುಗಳ ದಮನ ಮತ್ತು ಮಹಿಳೆಯರ ಮೇಲೆ ಯೋಧರಿಂದ ನಡೆಯುವ ಲೈಂಗಿಕ ದೌರ್ಜನ್ಯ ಸಹಿತ ಹಲವು ಕಾರಣಗಳಿಗಾಗಿ ಕರಾಳ ಕಾಯಿದೆಯನ್ನು ವಾಪಸ್ ಪಡೆದು ನಾಗರಿಕ ಹಕ್ಕುಗಳನ್ನು ನೀಡುವಂತೆ ಒತ್ತಾಯಿಸಿ ಇರೋಮ್ ಚಾನು ಶರ್ಮಿಳಾ ಉಪವಾಸ ಸತ್ಯಾಗ್ರಹ ಮಾಡುವ ಹೋರಾಟ ಶುರುಮಾಡಿದರು. ಸಶಸ್ತ್ರ ದಳದ ವಿಶೇಷಾಧಿಕಾರವು ಅನೇಕ ಮುಗ್ಧಜೀವಿಗಳ ಜೀವಹಾನಿಗೆ ಕಾರಣವಾಗುತ್ತಿದೆ ಎಂಬುದು ಶರ್ಮಿಳಾರವರ ವಾದವಾಗಿತ್ತು. ಸರಕಾರ ಅವರನ್ನು ಶಿಕ್ಷೆಗೆ ಒಳಪಡಿಸಿತು. ಸರಕಾರದ ಕೆಲವು ನೀತಿಗಳ ವಿರುದ್ಧದ ಮಣಿಪುರದ ಆಸ್ಪತ್ರೆಯ ಚಿಕ್ಕ 15 ಅಡಿ ಅಗಲ 10 ಅಡಿ ಉದ್ದದ ಕೋಣೆಯಲ್ಲೇ ನ್ಯಾಯಾಂಗ ಬಂಧನದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇರೋಮ್ ಶರ್ಮಿಳಾ, 13 ವರ್ಷಗಳ ಕಾಲ ತಮ್ಮ ಹೋರಾಟವನ್ನು ನಡೆಸಿಕೊಂಡು ಬಂದರು. ಅವರ ಸತ್ಯಾಗ್ರಹಕ್ಕೆ ಆತ್ಮಹತ್ಯೆಯ ಪ್ರಯತ್ನದ ಆರೋಪ ಹೊರಿಸಿ, ಸರಕಾರ ತಮ್ಮ ವಶಕ್ಕೆ ತೆಗೆದುಕೊಂಡು, ಉಪವಾಸ ನಿಲ್ಲಿಸುವ ತನಕ, ಆಕೆಯ ಮೂಗಿಗೆ ಕೊಳವೆ ಹಾಕಿ ಅದರ ಮೂಲಕ ಆಹಾರ ಹಾಕುವ ವ್ಯವಸ್ಥೆ ಮಾಡಿತು. ವರ್ಷಗಳು ಉರುಳಿದಂತೆ ಆಕೆಯ ಶಿಕ್ಷೆಯ ಅವಧಿಯೂ ಹೆಚ್ಚಾಯಿತು. ಭಾರತದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ವ್ಯಕ್ತಿಗೆ ಓಟು ಮಾಡುವ ಅಧಿಕಾರವಿಲ್ಲ. ಹಾಗಾಗಿ, ಇರೋಮ್ ಶರ್ಮಿಳಾ, 13 ವರ್ಷಗಳಿಂದ ಮತದಾನ ಮಾಡಿರಲಿಲ್ಲ.
ಉನ್ನತ ಮಟ್ಟದ ತನಿಖೆ
ಘಟನೆ ಸಂಬಂಧ ಉನ್ನತ ಮಟ್ಟದ ತನಿಖೆ ನಡೆಸುವುದಾಗಿ ಸೇನೆ ಅಧಿಕೃತ ಮಾಹಿತಿ ನೀಡಿದೆ. ಸೈನಿಕರು ಮತ್ತು ನಾಗರಿಕ ರಕ್ಷಣೆಯಲ್ಲಿ ಹದಿಮೂರು ಮಂದಿ ನಾಗರಿಕರು ಹಾಗೂ ಓರ್ವ ಯೋಧ ಹುತಾತ್ಮರಾಗಿದ್ದಾರೆ. ಸಂಘರ್ಷಕ್ಕೆ ಕಾರಣಗಳನ್ನು ಪತ್ತೆ ಹಚ್ಚಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದೆ.
ಈ ನಡುವೆ ನಾಗಾಲ್ಯಾಂಡ್ ಮುಖ್ಯಮಂತ್ರಿ ನೈಫು ರಿಯೋ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು, ನಾಗರಿಕರು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ಸಂಘರ್ಷವನ್ನು ಉನ್ನತ ಮಟ್ಟದ ತನಿಖೆ ನಡೆಸಲು ಆದೇಶ ನೀಡಿದ್ದಾರೆ. ಇದರೊಂದಿಗೆ ಭದ್ರತಾ ಪಡೆಯ ವಿರುದ್ಧ ಕೊಲೆ ಕೇಸು ದಾಖಲಿಸಲಾಗಿದೆ. ವಿಶೇಷ ತಂಡದ ಮೂಲಕ ಘಟನೆಯನ್ನು ತನಿಖೆ ನಡೆಸುವುದಾಗಿ ಅವರು ಪ್ರಕಟಿಸಿದ್ದಾರೆ.
ಸೇನಾಪೆಡಗಳ ವಿಶೇಷಾಧಿಕಾರ ಕಾಯಿದೆ (AFSPA) 1958ರಲ್ಲಿ ಅಂದಿನ ಅಸ್ಸಾಂ ರಾಜ್ಯದ ಭಾಗವಾಗಿದ್ದ ನಾಗಾ ಗುಡ್ಡಗಾಡು ಪ್ರದೇಶದಲ್ಲಿ ಜಾರಿ ಮಾಡಲಾಗಿತ್ತು. ಶಾಂತಿ ಕದಡಿದ ಪ್ರದೇಶ ಎಂದು ಘೋಷಿಸಿ ಯಥಾಸ್ಥಿತಿ ಕಾಪಾಡಲು ಕನಿಷ್ಠ ಮೂರು ತಿಂಗಳ ಕಾಲ ಈ ಕಾಯಿದೆ ಜಾರಿಯಲ್ಲಿರುವುದು. ಅನಂತರದ ವರ್ಷಗಳಲ್ಲಿ ಈ ಕಾಯಿದೆ ಭಾರತದ ಈಶಾನ್ಯ ರಾಜ್ಯಗಳಾದ ಅಸ್ಸಾಂ, ನಾಗಾಲ್ಯಾಂಡ್, ಮಣಿಪುರ, ಅಸ್ಸಾಂ ಗಡಿ ಭಾಗದಲ್ಲಿ ಇರುವ ಅರುಣಾಚಲ ರಾಜ್ಯದ ಎರಡು ಜಿಲ್ಲೆಗಳಲ್ಲಿ ಜಾರಿಯಲ್ಲಿದೆ.
ಈ ಹಿಂದೆ, 1983ರಲ್ಲಿ ಪಂಜಾಬ್ ಮತ್ತು ಚಂಡೀಗಡ ಕೇಂದ್ರಾಡಳಿತ ಪ್ರದೇಶದಲ್ಲಿ ಈ ಕರಾಳ ಕಾಯಿದೆಯನ್ನು ಜಾರಿ ಮಾಡಿ 14 ವರ್ಷಗಳ ಅಂತರ 1997ರಲ್ಲಿ ವಾಪಸ್ ತೆಗೆಯಲಾಯಿತು. ಆದರೆ, ಈಶಾನ್ಯ ರಾಜ್ಯಗಳಲ್ಲಿ ಈಗಲೂ ಈ ಕಾಯಿದೆ ಜಾರಿಯಲ್ಲಿದೆ. ಮಾತ್ರವಲ್ಲದೆ, 1990ರಲ್ಲಿ ಹಿಂದಿನ ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ಜಾರಿ ಮಾಡಲಾಗಿದ್ದು, ಈಗಲೂ ಜಾರಿಯಲ್ಲಿದೆ.
ಹಲವು ರಾಜಕೀಯ ಗುಂಪುಗಳು ಮತ್ತು ಸಂಘಟನೆಗಳು ಈ ಕರಾಳ ಕಾಯಿದೆ ವಿರುದ್ಧ ಧ್ವನಿ ಎತ್ತಿದ್ದಾರೆ. ನಾಗರಿಕ ಹಕ್ಕುಗಳ ಉಲ್ಲಂಘನೆ ಆಗುವುದಲ್ಲದೆ ಮಹಿಳೆಯರ ಮೇಲೆ ದೌರ್ಜನ್ಯ, ಹಾನಿ ಆಗುತ್ತಿರುವ ಹಿನ್ನೆಲೆಯಲ್ಲಿ ವಿರೋಧ ವ್ಯಕ್ತವಾಗಿತ್ತು.
ಮಣಿಪುರದ ಮಹಿಳೆಯರು ನಿರಂತರವಾಗಿ ಕಾಯಿದೆ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರು. ಹಲವು ಬಾರಿ ಬೆತ್ತಲೆ ಪ್ರತಿಭಟನೆ ಮಾಡುವ ಮೂಲಕ ಭದ್ರತಾ ಪಡೆಗಳ ದೌರ್ಜನ್ಯಗಳನ್ನು ಬೆತ್ತಲು ಮಾಡಿದ್ದರು.
ಸೇನಾಪಡೆಗಳ ವಿಶೇಷಾಧಿಕಾರ ಕಾಯಿದೆ – AFSPA ಪ್ರಕಾರ ಅಶಾಂತಿಗೆ ಒಳಗಾಗಿರುವ ಪ್ರದೇಶ ಎಂದು ಸರ್ಕಾರ ಗುರುತಿಸಿರುವ ಪ್ರದೇಶಗಳಲ್ಲಿ ಭಾರತೀಯ ಸೇನಾಪಡೆ ಹಾಗೂ ಕೇಂದ್ರ ಅರೆಸೇನಾ ಪಡೆಗಳಿಗೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಅಧಿಕಾರವನ್ನು ನೀಡುತ್ತದೆ.
ಕಾನೂನು ಮತ್ತು ಸುವ್ಯವಸ್ಥೆಗೆ ವಿರುದ್ಧವಾಗಿ ನಡೆದುಕೊಳ್ಳುವ ಯಾರ ಮೇಲೆಯಾದರೂ ಗುಂಡು ಹಾರಿಸುವ ಅಧಿಕಾರವನ್ನು ಈ ಕಾಯ್ದೆ ನೀಡುತ್ತದೆ.ಯಾರನ್ನೇ ಆದರೂ ವಾರಂಟ್ ಇಲ್ಲದೆ ಬಂಧಿಸಲು,ಯಾವುದೇ ವಾಹನ ತಡೆಯಲು ಮತ್ತು ಪರಿಶೀಲಿಸಲು ಹಾಗೂ ಐದು ಅಥವಾ ಅದಕ್ಕಿಂತ ಹೆಚ್ಚಿನ ಜನರು ಗುಂಪುಗೂಡದಂತೆ ನಿಷೇಧಿಸುವುದು ಈ ಕಾಯ್ದೆಯ ಕೆಲವು ‘ವಿಶೇಷ’ ಅಧಿಕಾರಗಳಲ್ಲಿ ಸೇರಿವೆ.
ನಾಗರಿಕರು ಶಸ್ತ್ರಾಸ್ತ್ರಗಳನ್ನು ಹೊಂದುವುದನ್ನು ಕೂಡ AFSPA ನಿರ್ಬಂಧಿಸಿದೆ. ಜತೆಗೆ ಆಯೋಗದ ನಿಯಮಗಳಿಗೆ ಒಳಪಡದ ಅಧಿಕಾರಿಗಳಿಗೆ ವಿಶೇಷ ಅಧಿಕಾರವನ್ನು ಕೂಡ ನೀಡುತ್ತದೆ.
ಒಮ್ಮೆ ಒಂದು ಪ್ರದೇಶದಲ್ಲಿ AFSPA ಜಾರಿಯಾದರೆ, ಯಾವುದೇ ವ್ಯಕ್ತಿ ಏನೇ ಕೃತ್ಯ ಮಾಡಿದ್ದರೂ ಅಥವಾ ಮಾಡಲು ಉದ್ದೇಶಿಸಿದ್ದರೂ ಅವರ ವಿರುದ್ಧ ಕೇಂದ್ರ ಸರ್ಕಾರ ಈ ಹಿಂದೆ ನಿರ್ಬಂಧಗಳನ್ನು ವಿಧಿಸಿದ್ದರ ಹೊರತಾಗಿ ವಿಚಾರಣೆ ಇಲ್ಲದೆ, ಮೊಕದ್ದಮೆ ಅಥವಾ ಕಾನೂನು ಪ್ರಕ್ರಿಯೆಯನ್ನು ನಡೆಸದೆ ಈ ಕಾಯ್ದೆಯ ಅಡಿ ಕ್ರಮ ತೆಗೆದುಕೊಳ್ಳಲು ಅವಕಾಶವಿದೆ.
ಮಾನವ ಹಕ್ಕುಗಳ ಉಲ್ಲಂಘನೆ
ಸಶಸ್ತ್ರ ಪಡೆಗಳ ವಿಶೇಷ ಅಧಿಕಾರದಡಿ, ಸರ್ಕಾರವು ‘ತೊಂದರೆಗೀಡಾದ ಪ್ರದೇಶಗಳು’ ಎಂದು ಗುರುತಿಸಿರುವ ಕಡೆಗಳಲ್ಲಿ ಭದ್ರತಾ ಪಡೆಗಳು ನಕಲಿ ಎನ್ ಕೌಂಟರ್‌ಗಳು ಹಾಗೂ ಇತರೆ ಮಾನವ ಹಕ್ಕುಗಳ ಉಲ್ಲಂಘನೆಗಳನ್ನು ಮಾಡಿವೆ ಎಂದು ಅನೇಕ ಆರೋಪಗಳಿವೆ.
ಸುಪ್ರೀಂಕೋರ್ಟ್ ದಾಖಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಎಲ್‌ಐ) ಪ್ರಕಾರ, ಮಣಿಪುರ ಒಂದರಲ್ಲೇ 2000 -2012ರ ನಡುವೆ ನ್ಯಾಯಾಂಗದ ವ್ಯಾಪ್ತಿಗೆ ಸೇರದ ಕನಿಷ್ಠ 1528 ಹತ್ಯೆಗಳು ನಡೆದಿವೆ. ಇವುಗಳಲ್ಲಿ ಹೆಚ್ಚಿನ ಸಾವುಗಳಲ್ಲಿ ಸಂತ್ರಸ್ತರು ಭದ್ರತಾ ಪಡೆಗಳ ವಶದಲ್ಲಿ ಇರುವಾಗ ಮತ್ತು ವಿಪರೀತ ಚಿತ್ರಹಿಂಸೆ ನೀಡಿದ ಕ್ರೂರ ಕೊಲೆಗಳಾಗಿವೆ ಎಂದು ಆರೋಪಿಸಲಾಗಿದೆ.
ಭದ್ರತಾ ಪಡೆಗಳು ಈ ಭಾಗದಲ್ಲಿನ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯಗಳನ್ನು ಎಸಗಿರುವ ಆರೋಪವೂ ಇದೆ. 2004ರಲ್ಲಿ ಮಣಿಪುರದ ಮಹಿಳೆಯೊಬ್ಬರನ್ನು ಅಪಹರಿಸಿ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾರೆ ಎಂದು ಅಸ್ಸಾಂ ರೈಫಲ್ಸ್ ವಿರುದ್ಧ ಭಾರಿ ಪ್ರತಿಭಟನೆ ನಡೆದಿತ್ತು. ‘ಭಾರತೀಯ ಸೇನೆಯವರೇ ಬನ್ನಿ ನಮ್ಮನ್ನು ಅತ್ಯಾಚಾರ ಮಾಡಿ’ ಎಂಬ ಬ್ಯಾನರ್ ಹಿಡಿದು ಮಹಿಳೆಯರು ಬೆತ್ತಲೆಯಾಗಿ ಪ್ರತಿಭಟನೆ ನಡೆಸಿದ್ದು, ಇಡೀ ದೇಶವನ್ನು ತಲ್ಲಣಗೊಳಿಸಿತ್ತು. ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದ್ದ ಇರೋಮ್ ಶರ್ಮಿಳಾ ಅವರಂತಹ ಕಾರ್ಯಕರ್ತರು AFSPA ವಿರುದ್ಧ ವ್ಯಾಪಕ ಪ್ರತಿಭಟನೆಗಳನ್ನು ನಡೆಸಿದ್ದರು.
2013ರಲ್ಲಿ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರ ನೇತೃತ್ವದಲ್ಲಿ ಸುಪ್ರೀಂಕೋರ್ಟ್ ಸಮಿತಿಯೊಂದನ್ನು ರಚಿಸಿತ್ತು. ಈ ಸಮಿತಿ ಮಣಿಪುರದಲ್ಲಿ ನಡೆದ ಆರು ನಕಲಿ ಎನ್ ಕೌಂಟರ್ ಆರೋಪದ ಬಗ್ಗೆ ತನಿಖೆ ನಡೆಸಿತ್ತು. ಮಾಜಿ ಮುಖ್ಯ ಚುನಾವಣಾ ಆಯುಕ್ತ ಜೆಎಂ ಲಿಂಗ್ಡೋ ಮತ್ತು ಕರ್ನಾಟಕದ ನಿವೃತ್ತ ಡಿಜಿಪಿ ಅಜಯ್ ಕುಮಾರ್ ಸಿಂಗ್ ಇದರ ಇತರ ಸದಸ್ಯರಾಗಿದ್ದರು.
2016ರ ಜುಲೈನಲ್ಲಿ ಸಶಸ್ತ್ರ ಪಡೆಗಳಿಗೆ ನಿರ್ದೇಶನ ನೀಡಿದ್ದ ಸುಪ್ರೀಂಕೋರ್ಟ್, AFSPA ಅನ್ವಯವಾಗುವ ಹಾಗೂ ತೊಂದರೆಪೀಡಿತ ಎಂದು ಘೋಷಿಸಲಾಗಿರುವ ಪ್ರದೇಶಗಳಲ್ಲಿ ಕೂಡ ವಿಪರೀತ ಅಥವಾ ಪ್ರತಿಕಾರದ ಬಲ ಪ್ರಯೋಗಿಸಬಾರದು ಎಂದು ಹೇಳಿತ್ತು. ಒಂದು ವರ್ಷದ ಬಳಿಕ, ಮಣಿಪುರದಲ್ಲಿ ನಡೆದ ನಕಲಿ ಎನ್‌ಕೌಂಟರ್ ಗಳ ಬಗ್ಗೆ ತನಿಖೆಗೆಂದು ಸಿಬಿಐಗೆ ಕೋರ್ಟ್ ಆದೇಶ ನೀಡಿತ್ತು.
ಈ ನಡುವೆ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳು ನಿರಂತರವಾಗಿ ಬಂಡುಕೋರ ಗುಂಪುಗಳನ್ನು ಶಾಂತಿ ಮಾತುಕತೆಯ ಪ್ರಕ್ರಿಯೆಗೆ ಒಳಪಡಿಸಲು ಪ್ರಯತ್ನ ಮಾಡುತ್ತಿರುವಾಗಲೇ ಇಂತಹ ಪ್ರಮಾದ ನಡೆದಿರುವುದು ಈಶಾನ್ಯದಲ್ಲಿ ಶಾಂತಿ ಸ್ಥಾಪನೆಯ ಪ್ರಯತ್ನಕ್ಕೆ ಬಹುದೊಡ್ಡ ಹಿನ್ನಡೆ ಆಗುತ್ತದೆ ಮತ್ತು ಪರಸ್ಪರ ಅಪನಂಬಿಕೆಗೂ ಕಾರಣವಾಗಲಿದೆ.
ನಾಗಾಲ್ಯಾಂಡ್ ನಲ್ಲಿ ಏಳಕ್ಕೂ ಹೆಚ್ಚು ಬುಡಕಟ್ಟು ಜನಾಂಗಗಳಿದ್ದು, ಬಹುಸಂಸ್ಕೃತಿಯ ರಾಜ್ಯವಾಗಿದೆ. ಕೆಲವೊಂದು ಬುಡಕಟ್ಟು ಜನಾಂಗ ಮ್ಯಾನ್ಮಾರ್ (ಬರ್ಮಾ) ದೇಶದಲ್ಲೂ ಇರುವುದರಿಂದ ಗಡಿ ಪ್ರದೇಶದ ಜಿಲ್ಲೆಗಳಲ್ಲಿ ಕೆಲವು ನಾಗಾ ಸಂಘಟನೆಗಳು ಭಾರತ ಸರಕಾರ ಹೇರಿರುವ ಕಾನೂನುಗಳನ್ನು ವಿರೋಧಿಸುತ್ತಾ ಬಂದಿವೆ. ಆದರೆ, ಭಾರತದ ಪರ ಇರುವ ಹಲವು ಸಂಘಟನೆಗಳು ಮಾತುಕತೆಗೆ ಒಲವು ಹೊಂದಿದ್ದವು. ಆದರೆ, ಒಂದು ತಪ್ಪು ಗುಪ್ತಚರ ಮಾಹಿತಿ ಮತ್ತು ಅರೆ ಸೇನಾ ಪಡೆಯ ಅಪರೇಷನ್ ವೈಫಲ್ಯ ಎಲ್ಲವನ್ನು ಹಿಂದಕ್ಕೆ ತಳ್ಳಿದಂತಾಗಿದೆ.