ಮತಾಂತರ ನಿಷೇಧ ಕಾಯ್ದೆ ಸುಗ್ರೀವಾಜ್ಞೆ ಮೂಲಕ ಜಾರಿಗೆ ಮುಂದಾದ ರಾಜ್ಯ ಸರ್ಕಾರ: ಇಂದಿನ ಕ್ಯಾಬಿನೆಟ್ ಸಭೆಯಲ್ಲಿ ಅನುಮೋದನೆ ಸಾಧ್ಯತೆ

Prasthutha|

ಬೆಂಗಳೂರು: ರಾಜ್ಯದಲ್ಲಿ ಮತಾಂತರ ತಡೆ ಮಸೂದೆಗೆ ಮರು ಜೀವ ನೀಡಿ ಅದನ್ನು ಕಾನೂನಾಗಿ ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸುವ ನಿಟ್ಟಿನಲ್ಲಿ ಆದೇಶ ಹೊರಡಿಸಲು ಸರ್ಕಾರ ಚಿಂತನೆ ನಡೆಸಿದ್ದು, ಇಂದು ನಡೆಯುವ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುವ ನಿರೀಕ್ಷೆ ಇದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

- Advertisement -

ಈಗಾಗಲೇ ಗೃಹ ಇಲಾಖೆಯು ಈ ಬಗ್ಗೆ ಸಂಪುಟ ಟಿಪ್ಪಣಿ ಸಿದ್ಧಪಡಿಸಿದೆ. Karnataka protection of right to freedom of religion ಮಸೂದೆಗೆ ಆದೇಶ ಜಾರಿಗೊಳಿಸುವ ಮೂಲಕ ಮರುಜೀವ ನೀಡಲಾಗುತ್ತದೆ ಎಂದು ತಿಳಿದುಬಂದಿದೆ. ಆದೇಶ ಜಾರಿಗೆ ಯಾವುದೇ ಕಾನೂನು ತಡೆ ಇಲ್ಲ ಎಂದು ಕಾನೂನು ಸಚಿವಾಲಯ ಸ್ಪಷ್ಟಪಡಿಸಿದೆ ಎಂದು ಮೂಲಗಳು ತಿಳಿಸಿವೆ.

ದೇಶದಲ್ಲಿ ಮತಾಂತರ ತಡೆ ಕಾನೂನು ಜಾರಿಗೊಳಿಸಿದ ಒಂಬತ್ತನೇ ರಾಜ್ಯವಾಗಿ ಕರ್ನಾಟಕ ಸೇರ್ಪಡೆಯಾಗುವ ನಿರೀಕ್ಷೆ ಇದೆ.ಈ ವಿವಾದಾತ್ಮಕ ಮಸೂದೆಯು, ಉಚಿತ ವಿವಾಹ, ಉದ್ಯೋಗ ಅಥವಾ ಇತರ ಆಮಿಷಗಳ ಮೂಲಕ ವಿವಾಹ ನೆರವೇರಿಸಿ ಧಾರ್ಮಿಕ ಮತಾಂತರ ನಡೆಸುವುದನ್ನು ನಿಷೇಧಿಸುತ್ತದೆ. ಬಲವಂತದ ಮತಾಂತರಕ್ಕೆ 3 ರಿಂದ 5 ವರ್ಷ ವರೆಗೆ ಜೈಲು ಶಿಕ್ಷೆ ಮತ್ತು 25 ಸಾವಿರ ರೂಪಾಯಿ ದಂಡ ವಿಧಿಸಲು ಮಸೂದೆ ಅವಕಾಶ ನೀಡುತ್ತದೆ.

- Advertisement -

ಅಪ್ರಾಪ್ತ ವಯಸ್ಸಿನವರು, ಮಹಿಳೆ ಅಥವಾ ಎಸ್ಸಿ/ಎಸ್ಟಿಗಳ ಮತಾಂತರಕ್ಕೆ 3 ರಿಂದ 10 ವರ್ಷ ಜೈಲು ಶಿಕ್ಷೆ ಮತ್ತು 50 ಸಾವಿರ ರಪಾಯಿ ದಂಡ ವಿಧಿಸಲು ಅವಕಾಶವಿದೆ. ಸಾಮೂಹಿಕ ಮತಾಂತರಕ್ಕೆ 3-10 ವರ್ಷ ಜೈಲು ಶಿಕ್ಷೆ ಹಾಗೂ ಒಂದು ಲಕ್ಷ ರೂಪಾಯಿ ದಂಡ ವಿಧಿಸಬಹುದಾಗಿದೆ.

2021 ಡಿಸೆಂಬರ್ ನಲ್ಲಿ ವಿಧಾನಸಭೆಯಲ್ಲಿ ಮಸೂದೆ ಆಂಗೀಕಾರವಾಗಿತ್ತು. ಆದರೆ ಆಡಳಿತಾರೂಢ ಬಿಜೆಪಿ ವಿಧಾನ ಪರಿಷತ್ ನಲ್ಲಿ ಬಹುಮತಕ್ಕೆ ಒಂದು ಮತದ ಕೊರತೆ ಇದ್ದ ಕಾರಣ ಇದರ ಅಂಗೀಕಾರಕ್ಕೆ ಗಮನ ಕೊಟ್ಟಿರಲಿಲ್ಲ. ಅದರೆ ಇದೀಗ ಮಸೂದೆಯ ಅಂಶಗಳನ್ನು ಸಾಧ್ಯವಾದಷ್ಟು ಬೇಗ ಜಾರಿಗೊಳಿಸಲು ಗೃಹ ಇಲಾಖೆ ಮುಂದಾಗಿದೆ. “ಸಚಿವ ಸಂಪುಟ ಸಭೆಯಲ್ಲಿ ಕರಡು ಸುಗ್ರೀವಾಜ್ಞೆಗೆ ಒಪ್ಪಿಗೆ ಪಡೆದು ಅಂತಿಮ ಒಪ್ಪಿಗೆಗಾಗಿ ರಾಜ್ಯಪಾಲರಿಗೆ ಕಳುಹಿಸಿಕೊಡಲಾಗುವುದು. ಆ ಬಳಿಕ ತಕ್ಷಣವೇ ಅದನ್ನು ಜಾರಿಗೊಳಿಸಲಿದ್ದೇವೆ” ಎಂದು ಮೂಲಗಳು ಸ್ಪಷ್ಟಪಡಿಸಿವೆ.

Join Whatsapp