CAA ವಿರೋಧಿ ನಾಟಕ ಪ್ರದರ್ಶನ: ಬೀದರ್ ಶಾಲೆಯ ವಿರುದ್ಧದ ದೇಶದ್ರೋಹ ಪ್ರಕರಣ ರದ್ದುಗೊಳಿಸಿದ ಹೈಕೋರ್ಟ್

Prasthutha|

ಬೆಂಗಳೂರು: CAA, NRC ಕಾಯ್ದೆ ವಿರೋಧಿಸಿ ನಾಟಕ‌ ಪ್ರದರ್ಶನ‌ ಆರೋಪಕ್ಕೆ ಸಂಬಂಧಿಸಿದಂತೆ ಬೀದರ್ ಶಾಹೀನ್ ಶಾಲೆಯ ಆಡಳಿತ ಮಂಡಳಿಯ ನಾಲ್ವರ ವಿರುದ್ಧದ ರಾಷ್ಟ್ರದ್ರೋಹ ಕೇಸ್​​ನ್ನು ಹೈಕೋರ್ಟ್ ರದ್ದುಪಡಿಸಿದೆ.

- Advertisement -

ಈ ಕುರಿತಾಗಿ ಹೈಕೋರ್ಟ್​​​ನ ಕಲಬುರಗಿ ಪೀಠದ ನ್ಯಾ. ಹೇಮಂತ್ ಚಂದನಗೌಡರ್​ ಆದೇಶ ಹೊರಡಿಸಿದ್ದಾರೆ. 2020ರಲ್ಲಿ ಸಿಎಎ, ಎನ್​​ಆರ್​​ಸಿ ಕಾಯ್ದೆ ವಿರೋಧಿಸಿ ಶಾಹೀನ್ ಶಾಲೆಯ 4, 5, 6ನೇ ತರಗತಿ ವಿದ್ಯಾರ್ಥಿಗಳಿಂದ ನಾಟಕ ಪ್ರದರ್ಶನ ಮಾಡಲಾಗಿತ್ತು. ನಾಟಕ ಪ್ರದರ್ಶನಕ್ಕೆ ಸಂಬಂಧಿಸಿದಂತೆ ಶಾಲೆಯ ಆಡಳಿತ ಮಂಡಳಿ ವಿರುದ್ಧ ಕೇಸ್ ದಾಖಲಾಗಿತ್ತು. ಪ್ರಕರಣ ರದ್ದು ಕೋರಿ ಅಲ್ಲಾವುದ್ದೀನ್​ ಮತ್ತು ಇತರರು ಅರ್ಜಿ ಸಲ್ಲಿಸಿದ್ದರು.

ಏನಿದು ಪ್ರಕರಣ?

- Advertisement -

ನೀಲೇಶ್‌ ಎಂಬ ವ್ಯಕ್ತಿ ಜ. 21 ರಂದು ಬೀದರ್‌ ನ್ಯೂಟೌನ್‌ ಪೊಲೀಸ್‌ ಠಾಣೆಗೆ ದೂರು ನೀಡಿ, ‘ಶಾಹಿನ್‌ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು ಹಾಗೂ ಆಡಳಿತ ಮಂಡಳಿಯವರು ಶಾಲಾ ಮಕ್ಕಳನ್ನು ಬಳಸಿಕೊಂಡು ದೇಶದ ಮೇಲೆ ದ್ವೇಷ ಭಾವನೆ ಬರುವಂತಹ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಚಪ್ಪಲಿಯಿಂದ ಹೊಡೆಯುವ ಮತ್ತು ಅವಾಚ್ಯ ಮಾತುಗಳನ್ನು ಮಕ್ಕಳಿಂದ ಆಡಿಸಿದ್ದಾರೆ. ಸಿಎಎ, ಎನ್‌ಆರ್‌ಸಿ ಹಾಗೂ ಎನ್‌ಪಿಆರ್‌ ಕಾನೂನು ಜಾರಿಗೆ ತಂದರೆ, ಮುಸಲ್ಮಾನರು ದೇಶಬಿಟ್ಟು ಹೋಗಬೇಕಾಗುತ್ತದೆ ಎಂದು ಮಕ್ಕಳಿಂದ ನಾಟಕದ ರೂಪದಲ್ಲಿ ಶಾಲೆಯಲ್ಲಿ ಪ್ರದರ್ಶನ ಮಾಡಿದ್ದಾರೆ’ ಎಂದು ಆರೋಪಿಸಿದ್ದರು.

ದೂರು ಆಧರಿಸಿ ಐಪಿಸಿ 504, 505(2), 124(ಎ) ಹಾಗೂ 153(ಎ) ಸೆಕ್ಷನ್‌ಗಳ ಅಡಿಯಲ್ಲಿ ದೇಶದ್ರೋಹ, ಜನಾಂಗೀಯ ದ್ವೇಷ, ಶಾಂತಿ ಭಂಗ, ಕಿಡಿಗೇಡಿತನ ಹಾಗೂ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪಗಳ ಅಡಿಯಲ್ಲಿ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದರು.



Join Whatsapp