ಬೆಂಗಳೂರು: ಎಸಿಬಿ ಕಚೇರಿಯು ಕಲೆಕ್ಷನ್ ಸೆಂಟರ್ ಆಗಿದೆ ಎಂಬ ಹೈಕೋರ್ಟ್ ಅಭಿಪ್ರಾಯವನ್ನು ಬೆಂಬಲಿಸಿ, ಎಸಿಬಿ ವಿರುದ್ಧ ಅದರ ಮುಖ್ಯ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದ ಆಮ್ ಆದ್ಮಿ ಪಾರ್ಟಿ ನಾಯಕರನ್ನು ಪೊಲೀಸರು ಬಂಧಿಸಿದರು.
ರೇಸ್ ಕೋರ್ಸ್ ರಸ್ತೆ ಎದುರು ಪ್ರತಿಭಟನೆ ನಡೆಸಿದ ಎಎಪಿ ಕಾರ್ಯಕರ್ತರು ಎಸಿಬಿ ವಿರುದ್ಧ ಭಿತ್ತಿಪತ್ರಗಳನ್ನು ಪ್ರದರ್ಶಿಸಿ ಘೋಷಣೆ ಕೂಗಿದರು.
ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಪಕ್ಷದ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ ಸದಂ, “ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲೆಂದು ರಚನೆಯಾಗಿರುವ ಎಸಿಬಿಯೇ ಕಲೆಕ್ಷನ್ ಕೇಂದ್ರವಾಗಿದೆ. ಈ ಬಗ್ಗೆ ಹೈಕೋರ್ಟ್ ಛೀಮಾರಿ ಹಾಕಿರುವುದು ಸ್ವಾಗತಾರ್ಹ. ಕಳಂಕಿತ ಎಡಿಜಿಪಿಯನ್ನು ಎಸಿಬಿಯಿಂದ ವಜಾ ಮಾಡಿ ಪ್ರಾಮಾಣಿಕರನ್ನು ನೇಮಿಸಬೇಕು. ಈವರೆಗಿನ ದಾಳಿಗಳಲ್ಲಿ ಎಸಿಬಿಯು ವಶಪಡಿಸಿಕೊಂಡಿರುವ ದಾಖಲೆಗಳು, ಚಿನ್ನಾಭರಣಗಳನ್ನು ಅಧಿಕಾರಿಗಳಿಗೆ ಹಿಂದಿರುಗಿಸಿರುವ ಅಂಕಿಅಂಶವನ್ನು ಸಾರ್ವಜನಿಕರಿಗೆ ಬಿಡುಗಡೆ ಮಾಡಬೇಕು” ಎಂದು ಆಗ್ರಹಿಸಿದರು.
ಎಎಪಿ ಮುಖಂಡರಾದ ಚನ್ನಪ್ಪಗೌಡ ನೆಲ್ಲೂರು ಮಾತನಾಡಿ, “ಎಸಿಬಿ ದಾಳಿಗೆ ಒಳಗಾದ ಭ್ರಷ್ಟರು ಅಲ್ಲಿನ ಅಧಿಕಾರಿಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಸುಲಭವಾಗಿ ಪಾರಾಗುತ್ತಿದ್ದಾರೆ. ಲೋಕಾಯುಕ್ತಕ್ಕೆ ಪರ್ಯಾಯವಾಗಿ ಎಸಿಬಿ ಅಸ್ತಿತ್ವಕ್ಕೆ ಬಂದು ಆರು ವರ್ಷಗಳಾಗಿದ್ದು, ಈವರೆಗೆ ಕೇವಲ ನಾಲ್ಕು ಮಂದಿಗೆ ಎಸಿಬಿಯಿಂದ ಶಿಕ್ಷೆಯಾಗಿದೆ. ಅಘೋಷಿತ ಆಸ್ತಿ ಕೇಸ್ ಗಳಿಗೆ ಸಂಬಂಧಿಸಿದಂತೆ 1000ಕ್ಕೂ ಹೆಚ್ಚಿನ ಸರ್ಕಾರಿ ಅಧಿಕಾರಿಗಳು ಮತ್ತು ನೌಕರರ ಮೇಲೆ ಎಸಿಬಿ ದಾಳಿ ನಡೆಸಿದೆ. ಆದರೆ ದಾಳಿಗೊಳಗಾದ ಅಧಿಕಾರಿಗಳು ಏನೂ ಆಗಿಲ್ಲ ಎನ್ನುವಂತೆ ಕೆಲವೇ ದಿನಗಳಲ್ಲಿ ಮತ್ತೆ ಅದೇ ಕಚೇರಿ, ಅದೇ ಹುದ್ದೆಗೆ ಹಾಜರಾಗುತ್ತಿದ್ದಾರೆ. ಎಸಿಬಿಯು ಮೇಲ್ಮಟ್ಟದ ಅಧಿಕಾರಿಗಳನ್ನು ಆರೋಪಿಗಳನ್ನಾಗಿ ಮಾಡದೇ ಕೇವಲ ಕೆಳ ಹಂತದ ಅಧಿಕಾರಿಗಳನ್ನು ಗುರಿಯಾಗಿಸಿಕೊಳ್ಳುತ್ತಿದೆ” ಎಂದು ಆರೋಪಿಸಿದರು.
ಎಎಪಿ ಮುಖಂಡರಾದ ಸಚಿನ್, ವಿಶ್ವನಾಥ್, ಶೆಶಾವಲಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.