‘ಆನ್ಸರ್ ಮಾಡಿ ಮೋದಿ’ ಎಂದು ಪ್ರಧಾನಿಯತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ವಾಗ್ದಾಳಿ

Prasthutha|

ಬೆಂಗಳೂರು: ಆನ್ಸರ್ ಮಾಡಿ ಮೋದಿ ಎಂದು ಸರಣಿ ಪ್ರಶ್ನೆಗಳನ್ನು ಕೇಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ಆರಂಭಿಸಿದ್ದಾರೆ. ಸರಣಿ ಎಕ್ಸ್ ಪೋಸ್ಟ್​ ಮಾಡುವ ಮೂಲಕ ಅವರು ಪ್ರಧಾನಿಯತ್ತ ಟೀಕಾಪ್ರಹಾರ ಮಾಡಿದ್ದಾರೆ.

- Advertisement -

ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಕೆಂಪುಕೋಟೆಯಿಂದ ನೀವು ಮಾಡಿದ ‘ಚುನಾವಣಾ ಭಾಷಣ’ ವನ್ನು ಗಮನಿಸಿದೆ. ದೇಶವನ್ನು ಕಾಡುತ್ತಿರುವ ಗಂಭೀರ ವಿದ್ಯಮಾನಗಳಿಗೆ ಮುಖಾಮುಖಿಯಾಗುವ, ಸಂವಿಧಾನದ ಆಶಯಗಳಡಿ ಅಭಿವೃದ್ಧಿ ಪಥ ಅನಾವರಣಗೊಳಿಸುವ ಮಾತುಗಳನ್ನಾಡಬೇಕಾದ ನೀವು ಚುನಾವಣಾ ಸಮಾವೇಶದಲ್ಲಿ ಮಾಡುವಂತಹ ರಾಜಕೀಯ ಭಾಷಣಕ್ಕೆ ತಮ್ಮನ್ನು ಸೀಮಿತಗೊಳಿಸಿದ್ದು ವಿಷಾದನೀಯ ಎಂದು ಸಿಎಂ ಬೇಸರ ವ್ಯಕ್ತಪಡಿಸಿದ್ದಾರೆ.

ಮಣಿಪುರ ಹಿಂಸಾಚಾರದ ಕುರಿತು ಖಚಿತ ನಿಲುವನ್ನು ಪ್ರಕಟಿಸದೆ ಬಾಯುಪಚಾರದ ಮಾತುಗಳ ಮೂಲಕ ಜಾರಿಕೊಂಡದ್ದು ನಿಮ್ಮ ವೈಫಲ್ಯಕ್ಕೆ ಹಿಡಿದ ಕನ್ನಡಿ. ಬೆಲೆ ಏರಿಕೆಯಿಂದ ಜನತೆ ತತ್ತರಿಸಿಹೋಗಿದ್ದಾರೆ. ದೇಶದ ಉತ್ತರ ಭಾಗದಲ್ಲಿ ನೈಸರ್ಗಿಕ ವಿಕೋಪಗಳಾದ ಅತಿವೃಷ್ಟಿ, ಮೇಘಸ್ಫೋಟದಿಂದ ಜನ ಬೀದಿಗೆ ಬಿದ್ದಿದ್ದಾರೆ, ದೇಶದ ರಾಜಧಾನಿಯಲ್ಲಿನ ಪ್ರವಾಹ ಜನರನ್ನು ಭೀತಿಗೀಡುಮಾಡಿದೆ. ಈ ವಿಷಯಗಳ ಬಗೆಗಿನ ನಿಮ್ಮ ಜಾಣಮೌನವನ್ನು ಅರ್ಥಮಾಡಿಕೊಳ್ಳುವಷ್ಟು ಜನ ಪ್ರಜ್ಞಾವಂತರಿದ್ದಾರೆ ಎಂದೂ ವಾಗ್ದಾಳಿ ನಡೆಸಿದ್ದಾರೆ.

- Advertisement -

ಜಾತಿ-ಧರ್ಮಗಳ ಆಧಾರದಲ್ಲಿ ದೇಶವನ್ನು ಒಡೆಯುವ ಬಿಜೆಪಿಯ ಅಜೆಂಡಾ ಈಗ ಗುಪ್ತವಾಗಿ ಉಳಿದಿಲ್ಲ, ಸರ್ಕಾರದ ಸಾಧನೆಗಳ ಆಧಾರದಲ್ಲಿ ಮುಂಬರುವ ಲೋಕಸಭಾ ಚುನಾವಣೆಯನ್ನು ಎದುರಿಸಲು ಸಾಧ್ಯ ಇಲ್ಲ ಎನ್ನುವುದು ನಿಮಗೆ ಮನದಟ್ಟಾಗಿದೆ. ಈ ಪರಿಸ್ಥಿತಿಯಲ್ಲಿ ಉಳಿದಿರುವ ಮತ್ತು ನಿಮಗೆ ಅತ್ಯಂತ ಪ್ರಿಯವಾದ ಅಸ್ತ್ರ ಅನ್ಯಧರ್ಮಗಳ ದ್ವೇಷದ ರಾಜಕಾರಣ ಮತ್ತು ಕಾಂಗ್ರೆಸ್ ವಿರುದ್ಧ ಓಲೈಕೆ ರಾಜಕಾರಣ ಮಾತ್ರ ಎಂದು ಸಿಎಂ ಟೀಕಿಸಿದ್ದಾರೆ.

ನಿಮ್ಮ ಸುದೀರ್ಘ ಭಾಷಣದಲ್ಲಿ ಮತ್ತೆ ಮತ್ತೆ ಕುಟುಂಬವಾದವನ್ನು ಪ್ರಸ್ತಾಪಿಸಿ ಕಾಂಗ್ರೆಸ್ ಪಕ್ಷವನ್ನು ಚುಚ್ಚುವ ಪ್ರಯತ್ನ ಮಾಡಿದ್ದೀರಿ. ಕುಟುಂಬವಾದದ ಬಗೆಗಿನ ನಿಮ್ಮ ನಿಲುವು ವೈಯಕ್ತಿಕವಾದದ್ದೇ? ಇಲ್ಲವೇ ಪಕ್ಷದ್ದೇ? ಕರ್ನಾಟಕದ ಚುನಾವಣೆಯಲ್ಲಿ ಈ ಬಾರಿ ನಿಮ್ಮ ಪಕ್ಷ ‘ಕುಟುಂಬ ರಾಜಕಾರಣ’ಕ್ಕೆ ಸೇರುವ 34 ಅಭ್ಯರ್ಥಿಗಳಿಗೆ ಚುನಾವಣಾ ಟಿಕೆಟ್‌ ನೀಡಿತ್ತು. ಬಿ.ಎಸ್‌ ಯಡಿಯೂರಪ್ಪನವರ ಕುಟುಂಬ, ಜಾರಕಿಹೊಳಿ ಕುಟುಂಬ, ಕತ್ತಿ ಕುಟುಂಬ, ಜೊಲ್ಲೆ, ನಿರಾಣಿ, ಗಣಿ ರೆಡ್ಡಿಗಳು, ಗುತ್ತೇದಾರ್‌ಗಳು ಇವರೆಲ್ಲಾ ನಿಮ್ಮ ಪಕ್ಷದ ಟಿಕೆಟ್‌ ಪಡೆದು ಚುನಾವಣೆ ಎದುರಿಸಲಿಲ್ಲವೇ? ಅಡ್ಡ ಮಾರ್ಗದಲ್ಲಿ ಅಧಿಕಾರ ಹಿಡಿಯಲು ಹೊರಟಾಗ ನಿಮಗೆ ಕುಟುಂಬವಾದದ ನೆನಪಾಗುವುದಿಲ್ಲವೇ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಕರ್ನಾಟದಲ್ಲಿ ದೇವೇಗೌಡರ ಕುಟುಂಬ, ಮಹಾರಾಷ್ಟ್ರದಲ್ಲಿ ಠಾಕ್ರೆ ಕುಟುಂಬ, ಹರಿಯಾಣದಲ್ಲಿ ಚೌತಾಲಾ ಕುಟುಂಬ, ಕಾಶ್ಮೀರದಲ್ಲಿ ಮುಫ್ತಿ ಕುಟುಂಬ, ಪಂಜಾಬ್‌ನಲ್ಲಿ ಬಾದಲ್‌ ಪರಿವಾರ ಇವರೊಂದಿಗೆ ನಿಮ್ಮ ಪಕ್ಷ ಅಧಿಕಾರ ಸವಿದಿಲ್ಲವೇ? ಎಂದಿರುವ ಸಿಎಂ ಪ್ರತಿ ಪೋಸ್ಟ್​ನಲ್ಲೂ #AnswerMadiModi ಎಂದಿದ್ದಾರೆ.



Join Whatsapp