ಲಕ್ಷದ್ವೀಪ ಆಡಳಿತಾಧಿಕಾರಿಗೆ ಮತ್ತೆ ಹಿನ್ನಡೆ; ಮನೆ ಧ್ವಂಸಗೊಳಿಸುವ ಆದೇಶಕ್ಕೆ ಹೈಕೋರ್ಟ್ ತಡೆ

Prasthutha|

ಸಮುದ್ರ ತೀರದ ಮನೆಗಳನ್ನು ನೆಲಸಮಗೊಳಿಸಲು ಲಕ್ಷದ್ವೀಪ ಆಡಳಿತಾಧಿಕಾರಿ ನೀಡಿದ್ದ ಆದೇಶಕ್ಕೆ ಕೇರಳ ಹೈಕೋರ್ಟ್ ಮಂಗಳವಾರ ತಡೆಯಾಜ್ಞೆ ನೀಡಿದ್ದು, ಮುಂದಿನ ಆದೇಶ ಬರುವವರೆಗೂ ದ್ವೀಪಗಳ ಕರಾವಳಿಯಲ್ಲಿರುವ ಮನೆಗಳನ್ನು ಧ್ವಂಸಗೊಳಿಸುವಂತಿಲ್ಲ ಎಂದು ಸೂಚಿಸಿದೆ.

- Advertisement -


ಇತ್ತೀಚೆಗೆ ಹೊರಡಿಸಿದ ಹೊಸ ಆದೇಶದಲ್ಲಿ , ಸಮುದ್ರ ತೀರದಿಂದ 20 ಮೀಟರ್ ಒಳಗೆ ಇರುವ ನೂರು ಮನೆಗಳನ್ನು ಧ್ವಂಸ ಮಾಡಲು ಲಕ್ಷದ್ವೀಪ ಆಡಳಿತ ಸೂಚಿಸಿತ್ತು. ತೀರದಿಂದ 20 ಮೀಟರ್ ಒಳಗೆ ಇರುವ ಶೌಚಾಲಯಗಳು ಮತ್ತು ದ್ವೀಪಗಳಲ್ಲಿ ನಿರ್ಮಿಸಲಾಗಿರುವ ಮೀನುಗಾರಿಕಾ ಶೆಡ್ ಗಳನ್ನು ಧ್ವಂಸ ಮಾಡಲು ನಿರ್ಧರಿಸಲಾಗಿತ್ತು.
ಮನೆಗಳ ಧ್ವಂಸಕ್ಕೆ ಜೂನ್ 30ರ ಗಡುವು ವಿಧಿಸಲಾಗಿತ್ತು. ಒಂದು ವೇಳೆ ನೋಟಿಸ್ ನೀಡಿದ ಕಟ್ಟಡಗಳನ್ನು ತೆರವುಗೊಳಿಸಲು ವಿಫಲವಾದರೆ ಅದನ್ನು ಅಧಿಕಾರಿಗಳೇ ಧ್ವಂಸ ಮಾಡಲಿದ್ದು, ಅದಕ್ಕೆ ತಗಲುವ ವೆಚ್ಚವನ್ನು ಕಟ್ಟಡದ ಮಾಲಿಕರೇ ಭರಿಸಬೇಕಾಗುತ್ತದೆ ಎಂದು ನೋಟಿಸ್ ನಲ್ಲಿ ತಿಳಿಸಲಾಗಿತ್ತು.


ಈ ಆದೇಶದ ವಿರುದ್ಧ ಲಕ್ಷದ್ವೀಪ ನಿವಾಸಿಗಳು ನ್ಯಾಯಾಲಯದ ಮೆಟ್ಟಿಲೇರಿದ್ದರು. ಆದರೆ ಲಕ್ಷ ದ್ವೀಪ ಆಡಳಿತವು ಅದು ಕೇವಲ ಕರಡು ಸಲಹೆಯಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿತ್ತು. ಇದರ ನಂತರವೂ ಸಂತ್ರಸ್ತರಿಗೆ ಧ್ವಂಸಗೊಳಿಸುವಿಕೆಯ ನೋಟಿಸ್ ಅನ್ನು ಆಡಳಿತ ನೀಡಿತ್ತು. ಹೀಗಾಗಿ ಅವರು ಮತ್ತೆ ನ್ಯಾಯಾಲಯವನ್ನು ಸಂಪರ್ಕಿಸಿದ್ದರು.

- Advertisement -


ಪ್ರಫುಲ್ ಪಟೇಲ್ ದ್ವೀಪದಲ್ಲಿ ಆಡಳಿತಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಹಿಂದುತ್ವ ಹೇರಿಕೆಯ ಪ್ರಯತ್ನದಲ್ಲಿ ಹಲವು ಜನವಿರೋಧಿ ಮಸೂದೆಗಳನ್ನು ಜಾರಿಗೆ ತಂದಿದ್ದರು. ಇದು ದ್ವೀಪದ ಜನರ ವಿರೋಧಕ್ಕೆ ಕಾರಣವಾಗಿತ್ತು. ಇದರ ವಿರುದ್ಧ ಕಾನೂನು ಹೋರಾಟಕ್ಕೂ ಮುಂದಾಗಿದ್ದು, ಕೇರಳ ಹೈಕೋರ್ಟ್ ನಲ್ಲಿ ಹಲವು ಅರ್ಜಿಗಳು ಸಲ್ಲಿಕೆಯಾಗಿವೆ. ಈ ಹಿಂದೆ ಡೈರಿ ಫಾರಂಗಳನ್ನು ಮುಚ್ಚುವ ಮತ್ತು ಶಾಲೆಯ ಮಧ್ಯಾಹ್ನದ ಊಟದಲ್ಲಿ ಮಾಂಸವನ್ನು ನಿಲ್ಲಿಸಬೇಕು ಎಂದು ಆಡಳಿತಾಧಿಕಾರಿಯ ಆದೇಶಕ್ಕೆ ಕೇರಳ ಹೈಕೋರ್ಟ್ ತಡೆ ನೀಡಿತ್ತು.



Join Whatsapp