ರಾಜ್ಯ ಬಿಜೆಪಿ ಸರ್ಕಾರದ ಮತ್ತೊಂದು ಹಗರಣ ಬಯಲು; ರಾಜಭವನಕ್ಕೆ ದೂರು

Prasthutha|

ಬೆಂಗಳೂರು: ಕಾಮಗಾರಿ ಟೆಂಡರ್ ಗಳಲ್ಲಿನ 40% ಕಮೀಷನ್ ಆರೋಪ ಕುರಿತಂತೆ ಗುತ್ತಿಗೆದಾರರ ಸಂಘದ ಪ್ರಮುಖರು ದೂರು ನೀಡಿರುವ ಬೆನ್ನಲ್ಲೇ ಇದೀಗ ಬಹುಕೋಟಿ ರೂಪಾಯಿ ಕೋವಿಡ್ ಹಗರಣ ಬೆಳಕಿಗೆ ಬಂದಿದೆ. ಈ ಕುರಿತಂತೆ ಸರ್ಕಾರೇತರ ಸಂಸ್ಥೆ ‘ಸಿಟಿಜನ್ ರೈಟ್ಸ್ ಫೌಂಡೇಷನ್’ ರಾಜ್ಯಪಾಲರಿಗೆ ದೂರು ನೀಡಿದ್ದು ನ್ಯಾಯಾಂಗ ತನಿಖೆಗೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿದೆ.

- Advertisement -

ಯಡಿಯೂರಪ್ಪ ಅವರ ಆಡಳಿತಾವಧಿಯಿಂದ ಇದೀಗ ಬಸವರಾಜ ಬೊಮ್ಮಯಿ ಅವರು ಸಿಎಂ ಆಗಿರುವ ಸರ್ಕಾರದಲ್ಲಿ ಕೋವಿಡ್-19 ನಿರ್ವಹಣೆ ಹೆಸರಲ್ಲಿ ಬಹುಕೋಟಿ ರೂಪಾಯಿ ಗೋಲ್ ಮಾಲ್ ನಡೆದಿದೆ. ಆರ್ ಟಿಐ ದಾಖಲೆಗಳಿಂದ ಈ ಅಕ್ರಮ ಬಯಲಾಗಿದ್ದು, ಆರೋಗ್ಯ ಸಚಿವ ಡಾ.ಸುಧಾಕರ್, ಐಎಎಸ್ ಅಧಿಕಾರಿಗಳಾದ ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ರಾಕೇಶ್ ಸಿಂಗ್, ಗೌರವ್ ಗುಪ್ತಾ, ಅನಿಲ್ ಕುಮಾರ್ ಸಹಿತ ಹಲವರ ಬಗ್ಗೆ ಅನುಮಾನ ವ್ಯಕ್ತಪಡಿಸಿ ಸಿಟಿಜನ್ ರೈಟ್ಸ್ ಮುಖ್ಯಸ್ಥ ಕೆ.ಎ.ಪಾಲ್ ಅವರು ರಾಜ್ಯಪಾಲರಿಗೆ ದೂರು ನೀಡಿದ್ದಾರೆ.

ಅಧಿಕಾರಿಗಳೇ ಬೇನಾಮಿ ಹೆಸರಲ್ಲಿ ಬಿಲ್ ಮಾಡಿದ್ದಾರೆ, ಇದರಲ್ಲಿ ಪ್ರಭಾವಿಗಳ ಪಾತ್ರ ಇದೆ ಎಂಬುದನ್ನು ಈ ದೂರಿನಲ್ಲಿ ಉಲ್ಲೇಖಿಸಿರುವ ಸಿಟಿಜನ್ ರೈಟ್ಸ್ ಫೌಂಡೇಷನ್, ಈ ಕೋವಿಡ್ ಹಗರಣದಲ್ಲಿ ರಾಜ್ಯದ ರಾಜಕಾರಣಿಗಳು ಹಾಗೂ ಅಧಿಕಾರಿಗಳೇ ಭಾಗಿಯಾಗಿದ್ದಾರೆ. ಈ ಬಗ್ಗೆ ಪೊಲೀಸ್ ತನಿಖೆ ನಡೆದರೆ ಈ ಅಧಿಕಾರಿಗಳು ಹಾಗೂ ರಾಜಕಾರಣಿಗಳು ಪ್ರಭಾವ ಬೀರುವ ಆತಂಕ ಇರುವುದರಿಂದ ನ್ಯಾಯಾಂಗ ತನಿಖೆ ನಡೆಯಬೇಕಿದೆ. ಈ ಸಂಬಂಧ ಸೂಕ್ತ ಕ್ರಮಕ್ಕಾಗಿ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಆಗ್ರಹಿಸಿದೆ.

- Advertisement -

 ▪ ಊಟದ ವೆಚ್ಚಕ್ಕೆಂದೇ 3 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಬಳಸಿರುವುದಾಗಿ ದಾಖಲೆ ಹೇಳುತ್ತಿದೆ.

▪ ಕ್ವಾರಂಟೈನ್ ವೆಚ್ಚದಲ್ಲೂ ಭಾರೀ ಗೋಲ್ ಮಾಲ್ ನಡೆದಿದೆ. ಕ್ವಾರಂಟೈನ್ ಸಂಬಂಧ ಹಣ ಪಾವತಿಯಾಗಿರುವ ಖಾಸಗಿ ಹೊಟೇಲ್ ಸಿಬ್ಬಂದಿ ಕೂಡಾ ಅವ್ಯವಹಾರವನ್ನು ಒಪ್ಪಿಕೊಂಡಿದ್ದು, ಶೇ.10ರಂತೆ ಲಕ್ಷಾಂತರ ರೂಪಾಯಿ ಕಮೀಷನ್ ದಂಧೆ ನೆಡೆದಿರುವ ಸತ್ಯವನ್ನೂ ಹೇಳಿಕೊಂಡಿದ್ದಾರೆ.

▪ಬೇರೆ ಬೇರೆ ಹಸರಲ್ಲಿ ಸಂಬಳ ರೂಪದಲ್ಲಿ ಅಕ್ರಮವಾಗಿ ಹಣ ಸಂದಾಯವಾಗಿದೆ.

▪ ಬ್ಯಾರಿಕೇಡ್ ಹಾಕುವ ನೆಪದಲ್ಲೂ ಖಾಸಗಿ ಕಂಪನಿಗಳಿಗೆ ಬರೋಬ್ಬರಿ 28 ಲಕ್ಷ ರೂಪಾಯಿಗೂ ಹೆಚ್ಚು ಮೊತ್ತ ಪಾವತಿಯಾಗಿದೆ.

▪ ಸಾರ್ವಜನಿಕರಿಗೆ ಆಹಾರ ಕಿಟ್ ವಿತರಿಸಿದ್ದಾಗಿ ನಮೂದಿಸಿ ಭಾರೀ ಮೊತ್ತದ ಹಣ ಭ್ರಷ್ಟರ ಪಾಲಾಗಿದೆ.

▪ ಜಾಗೃತಿ ಕಾರ್ಯಕ್ರಮದ ಹೆಸರಲ್ಲೂ ಅಕ್ರಮ ಬಿಲ್ ಮಾಡಲಾಗಿದೆ.

ಜಾಗೃತಿ ಕಾರ್ಯಕ್ರಮ ಸಂಬಂಧ ಆಟೋ ಸಹಿತ ವಿವಿಧ ವಾಹನಗಳ ಬಳಕೆಗಾಗಿ ಯಲಹಂಕದ ‘ರೈನ್ ಬೋ ಟೂರ್ಸ್ ಆ್ಯಂಡ್ ಟ್ರಾವೆಲ್ಸ್’ ಎಂಬ ಖಾಸಗಿ ಕಂಪನಿಗೆ 10.44 ಲಕ್ಷ ರೂಪಾಯಿ ಬಿಲ್ ಪಾವತಿಯಾಗಿದ್ದಾಗಿ ಬಿಬಿಎಂಪಿ ಅಧಿಕಾರಿಗಳು ದಾಖಲೆ ಒದಗಿಸಿದ್ದಾರೆ. ಈ ಟ್ರಾವೆಲ್ ಸಂಸ್ಥೆಯ ವಿಳಾಸದಲ್ಲಿ ಆ ಹೆಸರಿನ ಸಂಸ್ಥೆಯೇ ಇಲ್ಲ. ಆ ಕಂಪನಿಯದ್ದೆಂದು ನೀಡಲಾಗಿರುವ ಫೋನ್ ನಂಬರ್ ಗೆ ಕರೆ ಮಾಡಿದಾಗ ಆ ವ್ಯಕ್ತಿಯು, ನೀಡಿದ ಸುಳಿವಿನಂತೆ ಸಂಬಂಧಪಟ್ಟ ಬಿಬಿಎಂಪಿ ಸಿಬ್ಬಂದಿಯನ್ನು ಕೇಳಿದಾಗ, ಅಕ್ರಮ ನಡೆದಿರುವುದನ್ನು ಒಪ್ಪಿಕೊಂಡಿದ್ದಾರಲ್ಲದೆ, ಕಮೀಷನರ್ ಸೇರಿ ವಿವಿಧ ಅಧಿಕಾರಿಗಳಿಗೆ ಕಮೀಷನ್ ರೂಪದಲ್ಲಿ ಹಣ ಸಂದಾಯವಾಗಿರುವುದಾಗಿ ಹೇಳಿಕೊಂಡಿದ್ದಾರೆ. 

ಆರೋಪಿಗಳು ಯಾರು?

ಮಾನ್ಯ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲೇ ಕೋವಿಡ್-19 ಸೋಂಕು ನಿವಾರಣೆ, ನಿರ್ವಹಣೆ ಸಂಬಂಧ ವಿವಿಧ ಕಾರ್ಯಕ್ರಮಗಳು ಜಾರಿಯಾಗಿವೆ. ಯಡಿಯೂರಪ್ಪ ರಾಜೀನಾಮೆ ನೀಡಿದ ಬಳಿಕ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದು ಈ ಅವಧಿಯಲ್ಲೂ ಕೋವಿಡ್-19 ಸಂಬಂಧದ ಕಾರ್ಯಕ್ರಮಗಳು ನಡೆದಿವೆ. ಈ ಅವಧಿಗಳಲ್ಲಿ ಡಾ.ಕೆ.ಸುಧಾಕರ್ ಅವರು ಆರೋಗ್ಯ ಸಚಿವರಾಗಿದ್ದು ಐಎಎಸ್ ಅಧಿಕಾರಿಗಳಾದ ಅನಿಲ್ ಕುಮಾರ್, ಮಂಜುನಾಥ್ ಪ್ರಸಾದ್, ಗೌರವ್ ಗುಪ್ತಾ, ರಾಕೇಶ್ ಸಿಂಗ್ ಸಹಿತ ಹಲವು ಅಧಿಕಾರಿಗಳು ಬಿಬಿಎಂಪಿ ಮತ್ತು ನಗರಾಭಿವೃದ್ಧಿ ಇಲಾಖೆಯ ಉನ್ನತ ಅಧಿಕಾರಿಗಳಾಗಿದ್ದರು. ಈ ಮುಖ್ಯಮಂತ್ರಿಗಳು, ಸಚಿವರು ಹಾಗೂ ಉನ್ನತ ಅಧಿಕಾರಿಗಳ ಮೇಲುಸ್ತುವಾರಿಯಲ್ಲೇ ಈ ಕಾರ್ಯಕ್ರಮಗಳು ಜಾರಿಯಾಗಿವೆ. ಹಾಗಾಗಿ ಈ ಅವ್ಯವಹಾರಗಳಲ್ಲಿ ಈ ಅಧಿಕಾರಿಗಳ ಹಾಗೂ ಪ್ರಭಾವಿಗಳ ಪಾತ್ರ ಇರುವ ಅನುಮಾನವಿದೆ ಎಂದು ರಾಜ್ಯಪಾಲರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.



Join Whatsapp