ಬೆಂಗಳೂರು: ಸರ್ಕಾರದ ಆದೇಶವಿದ್ದರೂ ಕೃಷ್ಣ ಭಾಗ್ಯ ಜಲ ನಿಗಮದ ಕಚೇರಿಯನ್ನು ಆಲಮಟ್ಟಿಗೆ ಸ್ಥಳಾಂತರ ಮಾಡದಿರುವ ಅಧಿಕಾರಿಗಳ ವಿರುದ್ಧ ಹೋರಾಟ ತೀವ್ರಗೊಳಿಸಲು ಉತ್ತರಕರ್ನಾಟಕ ರೈತರ ಅಭಿವೃದ್ಧಿ ಸಂಘ ತಿರ್ಮಾನಿಸಿದೆ.
ಸರ್ಕಾರದ ಆದೇಶ ಉಲ್ಲಂಘನೆ ಮಾಡುತ್ತಿರುವ ನೀರಾವರಿ ನಿಗಮ ಮತ್ತು ಮತ್ತು ಕೆಬಿಜೆಎನ್ಎಲ್ ಅಧಿಕಾರಿಗಳ ವಿರುದ್ಧ ಮತ್ತೊಂದು ಸುತ್ತಿನ ಹೋರಾಟ ಸಿದ್ಧಗೊಂಡಿದೆ.
ಈ ಸಂಬಂಧ ಇಂದು ಉತ್ತರ ಕರ್ನಾಟಕ ರೈತರ ಅಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಯಾಸೀನ್ ಎನ್ ಜವಳಿ ನೇತೃತ್ವದಲ್ಲಿ ರೈತರು ಕೃಷ್ಣಾ ಭಾಗ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕರನ್ನು ಭೇಟಿ ಮಾಡಿದರು. ಸರ್ಕಾರದ ಆದೇಶದ ಪ್ರಕಾರ ಕೆಬಿಜೆಎನ್ ಎಲ್ ಕಚೇರಿಯನ್ನು ಉತ್ತರ ಕರ್ನಾಟಕಕ್ಕೆ ಸ್ಥಳಾಂತರ ಮಾಡಿದಿರುವ ಬಗ್ಗೆ ವಿವರಣೆ ಕೋರಿದರು. ನಿಗದಿತ ಅವಧಿಯೊಳಗೆ ಸ್ಥಳಾಂತರ ಪ್ರಕ್ರಿಯೆ ಮುಗಿಸಲು ಜಲಸಂಪನ್ಮೂಲ ಇಲಾಖೆ ಸೂಚನೆ ನೀಡಿದ್ದರೂ, ಇನ್ನೂ ಬೆಂಗಳೂರಿನಲ್ಲೇ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಕೆಲಸ ಮಾಡುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.
ಕಳೆದ ಮೇ 12 ರಂದು ರಾಜ್ಯ ಜಲಸಂಪನ್ಮೂಲ ಇಲಾಖೆಯು ಕೃಷ್ಣ ಭಾಗ್ಯ ಜಲ ನಿಗಮದ ಎಲ್ಲಾ ಕಚೇರಿಗಳನ್ನು ಮತ್ತು ಸಿಬ್ಬಂದಿಗಳನ್ನು ಒಂದು ವಾರದ ಒಳಗೆ ಆಲಮಟ್ಟಿಗೆ ಸ್ಥಳಾಂತರ ಮಾಡಲು ಸೂಚನೆ ನೀಡಿತ್ತು. ಜೊತೆಗೆ ಈ ಸಂಬಂಧ ಅನುಪಾಲನಾ ವರದಿ ನೀಡಲು ಸಹ ನಿರ್ದೇಶನ ನೀಡಲಾಗಿತ್ತು. ಆದರೂ ಕಚೇರಿ ಸ್ಥಳಾಂತರ ಆಗದ ಬಗ್ಗೆ ಯಾಸೀನ್ ಜವಳಿ ನೇತೃತ್ವದಲ್ಲಿ ನಿಗಮದ ಅಧಿಕಾರಿಗಳನ್ನು ಪ್ರಶ್ನಿಸಲಾಯಿತು. ಅಲ್ಲದೇ, ಕಚೇರಿ ಸ್ಥಳಾಂತರ ಆಗದ ಕುರಿತು ಮತ್ತು ಇದುವರೆಗೆ ಕೈಗೊಂಡಿರುವ ಆಡಳಿತಾತ್ಮಕ ಪ್ರಕ್ರಿಯೆಯನ್ನು ತಿಳಿಸುವಂತೆ ಕೋರಿ ನಿಗಮಕ್ಕೆ ಅರ್ಜಿ ಸಲ್ಲಿಸಲಾಯಿತು.
ಒಂದೊಮ್ಮೆ ಆಲಮಟ್ಟಿಗೆ ಕೆಬಿಜೆಎನ್ ಎಲ್ ಕಚೇರಿಯನ್ನು ಸ್ಥಳಾಂತರ ಮಾಡಲು ಮುಂದಾಗದಿದ್ದರೆ ಆಲಮಟ್ಟಿಯಲ್ಲೇ ಉಗ್ರ ಹೋರಾಟ ರೂಪಿಸಲಾಗುವುದು. ನೂರಾರು ರೈತರೊಂದಿಗೆ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಉತ್ತರ ಕರ್ನಾಟಕ ರೈತರ ಅಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಯಾಸೀನ್ ಎನ್ ಜವಳಿ ತಿಳಿಸಿದ್ದಾರೆ.
ಉತ್ತರಕರ್ನಾಟಕ ಭಾಗದ ರೈತರ ಬೇಡಿಕೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಕಚೇರಿ ಸ್ಥಳಾಂತರಕ್ಕೆ ಮೀನಾ ಮೇಷ ಏಣಿಸುವುದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ. ಕೂಡಲೇ ನೀರಾವರಿ ನಿಗಮದ ಅಧಿಕಾರಿಗಳು 2022 ರ ಮೇ 12 ರಂದು ಹೊರಡಿಸಲಾಗಿರುವ ಆದೇಶವನ್ನು ಪಾಲನೆ ಮಾಡಬೇಕು ಎಂದು ಯಾಸೀನ್ ಎನ್ ಜವಳಿ ಆಗ್ರಹಿಸಿದ್ದಾರೆ.