ಬೆಂಗಳೂರು: ಮೆಟ್ರೋ ಕಾಮಗಾರಿಗೆ ಬಳಸುತ್ತಿದ್ದ ಕ್ರೇನ್ ಶುಕ್ರವಾರ ರಾತ್ರಿ ನೆಲಕ್ಕುರುಳಿ ಬಿದ್ದಿದೆ. ಆ ಮೂಲಕ ಮೆಟ್ರೊ ಕಾಮಗಾರಿ ವೇಳೆ ಮತ್ತೊಂದು ಅವಘಡ ಸಂಭವಿಸಿದೆ. ಸಿಲ್ಕ್ ಬೋರ್ಡ್‌ನಿಂದ ಮಡಿವಾಳಕ್ಕೆ ಸಂಪರ್ಕಿಸುವ ಮಾರ್ಗದಲ್ಲಿ ಘಟನೆ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮಡಿವಾಳ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಮೆಟ್ರೋ ಕಾಮಗಾರಿಗೆ ಬಳಸುತ್ತಿದ್ದ ಕ್ರೇನ್ ಜಾರಿ ಬೀಳಲು ಕಾರಣ ಏನು ಎಂಬುವುದನ್ನು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಮಡಿವಾಳ ಕಡೆಗೆ ಬರುವವರು ಬಿಟಿಎಂ ಲೇಔಟ್ ಮೂಲಕ ಸಂಚರಿಸಬೇಕು. ಅದೇ ರೀತಿಯಾಗಿ ಬಿಟಿಎಂ ಲೇಔಟ್ನಿಂದ ಮಡಿವಾಳಕ್ಕೆ ಹೋಗುವವರು ಎಚ್ಎಸ್ಆರ್ 14ನೇ ಮುಖ್ಯ ರಸ್ತೆ ಮೂಲಕ ಸಾಗಬೇಕಿದೆ.
ಇತ್ತೀಚೆಗೆ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಕುಸಿದು ಬಿದ್ದು, ಮಹಿಳೆ ಮತ್ತು ಎರಡು ವರ್ಷದ ಮಗು ಸಾವನ್ನಪ್ಪಿರುವಂತಹ ಘಟನೆ ನಗರದ ನಾಗವಾರದಲ್ಲಿ ನಡೆದಿತ್ತು. ಕಲ್ಯಾಣ್ ನಗರದಿಂದ ಹೆಚ್ಆರ್ಬಿಆರ್ ಲೇಔಟ್ಗೆ ಹೋಗುವ ರಸ್ತೆಯಲ್ಲಿ ನಿರ್ಮಿಸಲಾಗುತ್ತಿದ್ದ ಮೆಟ್ರೊ ರೈಲ್ವೆ ಪಿಲ್ಲರ್ನ ರಾಡ್ಗಳು ರಸ್ತೆ ಮೇಲೆ ಕುಸಿದು ಬಿದ್ದ ಪರಿಣಾಮ ಅವಘಡ ಸಂಭವಿಸಿತ್ತು.
ಈ ಘಟನೆ ಮಾಸುವ ಮುನ್ನವೇ ನಮ್ಮ ಮೆಟ್ರೊ ಕಾಮಗಾರಿ ವೇಳೆ ಮತ್ತೊಂದು ಅವಘಡ ಉಂಟಾಗಿರುವುದು ಸಾರ್ವಜನಿಕರಲ್ಲಿ ಮತ್ತು ವಾಹನ ಸವಾರರಲ್ಲಿ ಆತಂಕ ಶುರುವಾಗಿದೆ.