ಹಲಾಲ್ ಉತ್ಪನ್ನಗಳ ವಿರುದ್ಧ ಸಂಘಪರಿವಾರದಿಂದ ಮತ್ತೆ ಅಭಿಯಾನ

Prasthutha|

ಬೆಂಗಳೂರು: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಹಲಾಲ್ ಸರ್ಟಿಫಿಕೇಟ್ ಹೊಂದಿದ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಹಿಂದೂಗಳನ್ನು ಮನವೊಲಿಸುವ ನಿಟ್ಟಿನಲ್ಲಿ ಸಂಘಪರಿವಾರದ ಕಾರ್ಯಕರ್ತರು ಮನೆ ಮನೆಗೆ ತೆರಳುವ ಅಭಿಯಾನವನ್ನು ಆರಂಭಿಸಿದ್ದಾರೆ.

- Advertisement -

ಜನರಲ್ಲಿ ಜಾಗೃತಿ ಮೂಡಿಸಲು ಹಲಾಲ್ ಜಿಹಾದ್ ಎಂಬ ಕೈಪಿಡಿಯನ್ನು ವಿತರಿಸಲು ಯೋಜನೆ ರೂಪಿಸಲಾಗಿದೆ ಎಂದು ಸಂಘಪರಿವಾರದ ಮುಖಂಡರು ತಿಳಿಸಿದ್ದಾರೆ. ಬೆಂಗಳೂರಿನ ಜಯನಗರ ಮತ್ತು ಬಸವನಗುಡಿ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಚಾರ ಕಾರ್ಯ ನಡೆಯಲಿದೆ.

ಜಯನಗರ ವಿಧಾನಸಭಾ ಕ್ಷೇತ್ರವನ್ನು ಕಾಂಗ್ರೆಸ್ ಶಾಸಕಿ ಸೌಮ್ಯರೆಡ್ಡಿ ಮತ್ತು ಬಸವನಗುಡಿ ಕ್ಷೇತ್ರವನ್ನು ಬಿಜೆಪಿ ಶಾಸಕ ರವಿ ಸುಬ್ರಮಣ್ಯ ಪ್ರತಿನಿಧಿಸುತ್ತಿದ್ದಾರೆ. ಇಲ್ಲಿ ಸೂಕ್ಷ್ಮ ಪ್ರದೇಶಗಳಿದ್ದು, ವಿಶೇಷವಾಗಿ ಜಯನಗರದಲ್ಲಿ ಪೊಲೀಸರು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.

- Advertisement -

ಹಿಂದೂ ಜನ ಜಾಗೃತಿ ಸಮಿತಿ, ಶ್ರೀರಾಮ ಸೇನೆ, ರಾಷ್ಟ್ರ ರಕ್ಷಣಾ ಪಡೆ ಮತ್ತು ವಿಶ್ವ ಹಿಂದೂ ಸನಾತನ ಪರಿಷತ್ ಸಂಘಟನೆಗಳು ಜಂಟಿಯಾಗಿ ಈ ಅಭಿಯಾನವನ್ನು ಹಮ್ಮಿಕೊಂಡಿವೆ.

ಹಲಾಲ್ ಸರ್ಟಿಫಿಕೇಟ್ ಹೊಂದಿದ ಹೋಟೆಲ್ ಮಾಲಕರು, ಕೈಗಾರಿಕೋದ್ಯಮಿಗಳು, ಅಂಗಡಿ ಮಾಲಕರು, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವ್ಯಾಪಾರಿಗಳೊಂದಿಗೆ ವಹಿವಾಟು ನಡೆಸದಂತೆ ಮೈಕ್, ಧ್ವನಿವರ್ಧಕಗಳ ಮೂಲಕ ಜಾಗೃತಿ ಮೂಡಿಸುವ ಸಂದೇಶಗಳನ್ನು ಹರಡಲು ಆಟೋ ರಿಕ್ಷಾಗಳನ್ನು ಬಳಸಲಾಗುವುದು ಎಂದು ಸಂಘಪರಿವಾರದ ಮುಖಂಡರು ತಿಳಿಸಿದ್ದಾರೆ.

ಹಿಂದೂ ಜನ ಜಾಗೃತಿ ಸಮಿತಿ ರಾಜ್ಯ ವಕ್ತಾದ ಮೋಹನ್ ಗೌಡ ಅವರು ದೀಪಾವಳಿ ಹಬ್ಬ ಮುಗಿಯುವವರೆಗೂ ಹಲಾಲ್ ವಿರುದ್ಧ ಅಭಿಯಾನ ನಡೆಸಲಾಗುವುದು ಎಂದು ಈ ಹಿಂದೆ ಘೋಷಿಸಿದ್ದರು.



Join Whatsapp