ನವದೆಹಲಿ: ದೇಶ ತೊರೆದಿದ್ದ ಅಮೆರಿಕ ಮೂಲದ ಕಾರು ತಯಾರಿಕಾ ಕಂಪನಿ ಫೋರ್ಡ್, ಭಾರತಕ್ಕೆ ಮರಳುತ್ತಿರುವುದಾಗಿ ಘೋಷಿಸಿದೆ.
ರಫ್ತು ಉದ್ದೇಶದೊಂದಿಗೆ ಚೆನ್ನೈನಲ್ಲಿರುವ ತನ್ನ ತಯಾರಿಕಾ ಘಟಕದಲ್ಲಿ ಮರು ಕಾರ್ಯಾಚರಣೆ ನಡೆಸುವುದಾಗಿ ಉದ್ದೇಶ ಪತ್ರವನ್ನು ತಮಿಳುನಾಡು ಸರ್ಕಾರಕ್ಕೆ ಕಂಪನಿ ಸಲ್ಲಿಸಿದೆ.
ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಇತ್ತೀಚಿನ ಅಮೆರಿಕ ಪ್ರವಾಸದ ಸಂದರ್ಭದಲ್ಲಿ ಫೋರ್ಡ್ ಕಂಪನಿಯ ಹಿರಿಯ ಅಧಿಕಾರಿಗಳು ಮಾತುಕತೆ ನಡೆಸಿ, ತಮ್ಮ ಪ್ರಸ್ತಾವವನ್ನು ಸಲ್ಲಿಸಿದ್ದಾರೆ.
ಸುಮಾರು ಮೂರು ದಶಕಗಳ ಕಾಲ ಭಾರತದಲ್ಲಿದ್ದ ಫೋರ್ಡ್ 2021ರಲ್ಲಿ ದೇಶವನ್ನು ತೊರೆಯುವ ನಿರ್ಣಯ ಕೈಗೊಂಡಿತ್ತು. ದೇಶದಲ್ಲಿರುವ ಫೋರ್ಡ್ನ ಎರಡು ತಯಾರಿಕಾ ಘಟಕದಲ್ಲಿನ ಉತ್ಪಾದನೆಯನ್ನು ಸ್ಥಗಿತಗೊಳಿಸುತ್ತಿರುವುದಾಗಿ ಘೋಷಿಸಿತ್ತು. ಭಾರತದಲ್ಲಿನ ತನ್ನ ಕಾರ್ಯಾಚರಣೆಯ ಪುನರ್ರಚನೆಯ ಭಾಗವಾಗಿ ಆಮದು ಮಾಡಿಕೊಳ್ಳುವ ಕಾರುಗಳನ್ನು ಮಾತ್ರ ಮಾರಾಟ ಮಾಡುವುದಾಗಿ ಕಂಪನಿ ಘೋಷಿಸಿತ್ತು.