►ಮೃತ ಆಂಬುಲೆನ್ಸ್ ಚಾಲಕನ ಕುಟುಂಬಕ್ಕೆ ₹50 ಲಕ್ಷ ಪರಿಹಾರ ನೀಡುವಂತೆ ಆಗ್ರಹ
ಬೆಂಗಳೂರು : ರೋಗಿಯನ್ನು ಸಾಗಿಸುವಾಗ ಆಂಬುಲೆನ್ಸ್ ಅಪಘಾತಕ್ಕೀಡಾಗಿ ದುರ್ಮರಣ ಹೊಂದಿರುವ ಆಂಬುಲೆನ್ಸ್ ಚಾಲಕ ಮಡಂತ್ಯಾರಿನ ಶಬೀರ್ ಕುಟುಂಬಕ್ಕೆ ರಾಜ್ಯ ಸರ್ಕಾರ 50 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಎಸ್‌ಡಿಪಿಐ ರಾಜ್ಯ ಸಮಿತಿ ಸದಸ್ಯ ರಿಯಾಝ್ ಕಡಂಬು ಆಗ್ರಹಿಸಿದ್ದಾರೆ.
ಈ ಹಿಂದಿನ ಸಿದ್ದರಾಮಯ್ಯ ಸರಕಾರ ಘೋಷಿಸಿದ್ದ ಹರೀಶ್ ಯೋಜನೆ ಮಾದರಿಯಲ್ಲಿ ಮೃತ ಆಂಬುಲೆನ್ಸ್ ಚಾಲಕ ಶಬ್ಬೀರ್ ಯೋಜನೆ ಘೋಷಣೆ ಮಾಡುವಂತೆಯೂ ಅವರು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಅಪಘಾತದಿಂದ ಜೀವಗಳು ರಸ್ತೆಗಳಲ್ಲಿ ನರಳಾಡುವಾಗ ಜೀವ ರಕ್ಷಿಸುತ್ತಿದ್ದ ಶಬೀರ್ ಅವರು ರೋಗಿಯೊಬ್ಬರನ್ನು ಸಾಗಿಸುತ್ತಿದ್ದಾಗ ಆಂಬುಲೆನ್ಸ್ ಅಪಘಾತವಾಗಿ ಜೀವ ಕಳೆದುಕೊಂಡಿರುವಾಗ ಸರ್ಕಾರ ಅವರ ಕುಟುಂಬಕ್ಕೆ ಪರಿಹಾರ ಘೋಷಣೆ ಮಾಡದಿರುವುದು ದುರಂತ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನೂ ಕಾಲ ಮಿಂಚಿಲ್ಲ, ಶಬೀರ್ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಪ್ರತಿಯೊಬ್ಬ ಆಂಬುಲೆನ್ಸ್ ಚಾಲಕರಿಗೆ ಪ್ರೋತ್ಸಾಹ ಧನ, ಅಪಘಾತ ವಿಮೆ, ಕುಟುಂಬಕ್ಕೆ ಪರಿಹಾರ ಯೋಜನೆಯನ್ನು ಘೋಷಣೆ ಮಾಡುವ ಉದ್ದೇಶದಿಂದ ಈ ಹಿಂದೆ ಸಿದ್ದರಾಮಯ್ಯ ಸರಕಾರ ಘೋಷಿಸಿದ್ದ ಹರೀಶ್ ಯೋಜನೆ ಮಾದರಿಯಲ್ಲಿ ಶಬೀರ್ ಯೋಜನೆಯನ್ನು ಘೋಷಿಸಬೇಕೆಂದು ಎಂದು ರಿಯಾಝ್ ಕಡಂಬು ಆಗ್ರಹಿಸಿದ್ದಾರೆ.
ಶಬೀರ್ ಅವರ ಮೃತದೇಹವನ್ನು ಮನೆಗೆ ಸಾಗಿಸುವಾಗ ಗೌರವ ಸೂಚಕವಾಗಿ ಆಂಬುಲೆನ್ಸ್‌ಗಳೊಂದಿಗೆ ಭಾಗಿಯಾದ ಜಿಲ್ಲೆಯ ಆಂಬುಲೆನ್ಸ್ ಚಾಲಕರಿಗೆ ಅವರು ಧನ್ಯವಾದ ಸಲ್ಲಿಸಿದ್ದಾರೆ.