ಬೆಂಗಳೂರು : ಕರ್ನಾಟಕದಲ್ಲಿ ಐಪಿಎಸ್ ಅಧಿಕಾರಿಯಾಗಿದ್ದು, ಹುದ್ದೆಗೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರಿದ್ದ ಅಣ್ಣಾಮಲೈ ಅವರ ಫೋಟೊ ಒಂದು ಇಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪೊಲೀಸ್ ಅಧಿಕಾರಿ ಹುದ್ದೆಯಲ್ಲಿದ್ದಾಗ ಕರ್ನಾಟಕದ ಸಿಂಗಂ ಎಂದೇ ಖ್ಯಾತರಾಗಿದ್ದ ಅಣ್ಣಾಮಲೈ, ಬಿಜೆಪಿ ಸೇರಿದ ಬಳಿಕ ನಾಯಕರ ಮುಂದೆ ತಲೆತಗ್ಗಿಸಿ ನಿಲ್ಲುವಂತಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಲಾಗುತ್ತಿದೆ.
ವೈರಲ್ ಆಗಿರುವ ಫೋಟೊದಲ್ಲಿ ಬಿಜೆಪಿ ನಾಯಕರು ಸುತ್ತಲೂ ಸೋಫಾದಲ್ಲಿ ಕುಳಿತಿದ್ದಾರೆ. ಅಣ್ಣಾಮಲೈ ಅವರ ಮುಂದೆ ಕೈಕಟ್ಟಿ, ತಲೆತಗ್ಗಿಸಿ ನಿಂತಿದ್ದಾರೆ. ತಮಿಳುನಾಡಿನ ಸಭೆಯೊಂದರಲ್ಲಿ ತೆಗೆದ ಫೋಟೊ ಇದು ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ಸ್ವತಃ ಅಣ್ಣಾಮಲೈ ಅವರು ಸಮರ್ಥನೆ ನೀಡಿದ್ದರೂ, ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುವುದು ಮಾತ್ರ ನಿಂತಿಲ್ಲ. ದಕ್ಷ ಹಾಗೂ ಶಿಸ್ತಿನ ಅಧಿಕಾರಿಯಾಗಿದ್ದ ಅಣ್ಣಾಮಲೈ ಬಿಜೆಪಿ ಸೇರಿ ಆಗಿರುವ ಈಗಿನ ಅವರ ಸ್ಥಿತಿ ಬಗ್ಗೆ ಮರುಕ ಹುಟ್ಟಿಸುತ್ತಿದೆ ಎಂದು ಅನೇಕರು ಬೇಸರ ವ್ಯಕ್ತಪಡಿಸಿದ್ದಾರೆ.
“ಕೊಯಮತ್ತೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ವಂದನಾರ್ಪಣೆ ಮಾಡುವಾಗಿನ ನನ್ನ ಸರಳ ನಿಲುವು ಕರ್ನಾಟಕದ ಸ್ನೇಹಿತರ ನಡುವೆ ಸಾಮಾಜಿಕ ಜಾಲತಾಣದಲ್ಲಿ ಕಿಡಿ ಹೊತ್ತಿಸುತ್ತದೆ ಎಂಬ ಕಲ್ಪನೆ ಕೂಡ ಇರಲಿಲ್ಲ. ನಮ್ಮ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ಕಾರ್ಯಕ್ರಮದಲ್ಲಿ ನಮ್ಮ ಆಹ್ವಾನಿತರಾಗಿ ಹಾಜರಿದ್ದರು” ಎಂದು ಅಣ್ಣಾಮಲೈ ಹೇಳಿದ್ದಾರೆ.
ಈ ಫೋಟೊವನ್ನು ಸಿ.ಟಿ. ರವಿ ಅವರು ಟ್ವೀಟ್ ಮಾಡಿದ್ದರು ಮತ್ತು ಅದನ್ನು ಸ್ವತಃ ಅಣ್ಣಾಮಲೈ ರೀಟ್ವೀಟ್ ಮಾಡಿದ್ದರು.