ಬೆಳಗಾವಿ: ಅಂಗನವಾಡಿ ಮಕ್ಕಳ ತಟ್ಟೆಗೆ ಬಡಿಸಿದ್ದ ಮೊಟ್ಟೆಯನ್ನು ಎತ್ತಿಕೊಳ್ಳುತ್ತಿದ್ದ ಕೊಪ್ಪಳದ ಗುಂಡೂರು ಗ್ರಾಮದ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸೂಚನೆ ಮೇರೆಗೆ ಅಮಾನತುಗೊಳಿಸಲಾಗಿದೆ.
ಕೊಪ್ಪಳದ ಗುಂಡೂರು ಗ್ರಾಮದ ಅಂಗನವಾಡಿಯ ಕಾರ್ಯಕರ್ತೆ ಲಕ್ಷ್ಮೀ ಹಾಗೂ ಸಹಾಯಕಿ ಶಹನಾಜ್ ಅಮಾನತು ಶಿಕ್ಷೆಗೆ ಒಳಗಾದ ಸಿಬ್ಬಂದಿ.
ಅಂಗನವಾಡಿ ಕಾರ್ಯಕರ್ತರ ಮೊಟ್ಟೆ ವಂಚನೆ ವಿಡಿಯೋ ವೈರಲ್ ಆಗಿತ್ತು. ಇದನ್ನು ಗಮನಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ತಕ್ಷಣ ಇಲಾಖೆ ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯನ್ನು ಸಸ್ಪೆಂಡ್ ಮಾಡುವಂತೆ ಸೂಚಿಸಿ ಇಡೀ ಪ್ರಕರಣದ ವರದಿ ನೀಡುವಂತೆ ಆದೇಶಿಸಿದ್ದಾರೆ.
ವಿಡಿಯೋದಲ್ಲಿ ಅಂಗನವಾಡಿ ಶಾಲೆಯ ಸಿಬ್ಬಂದಿ ಮೊದಲು ಊಟಕ್ಕಾಗಿ ಕುಳಿತಿದ್ದ ಮಕ್ಕಳಿಗೆ ಮೊಟ್ಟೆ ಕೊಟ್ಟು ಫೋಟೋ ಹಾಗೂ ವಿಡಿಯೋ ತೆಗೆಯುತ್ತಾರೆ. ಜೊತೆಗೆ ಪ್ರಾರ್ಥನೆ ಕೂಡ ಹೇಳಿಸುತ್ತಾರೆ. ಪ್ರಾರ್ಥನೆ ಮುಗಿಯುತ್ತಿದ್ದಂತೆ ಮಕ್ಕಳು ಆಸೆಯಿಂದ ಮೊಟ್ಟೆ ತಿನ್ನಲು ತಟ್ಟೆಗೆ ಕೈ ಹಾಕಿದಾಗ ಅಡುಗೆ ಸಿಬ್ಬಂದಿ ಮರಳಿ ಮಕ್ಕಳ ಕೈಯಿಂದ ಮೊಟ್ಟೆ ಕಸಿದುಕೊಳ್ಳುತ್ತಾರೆ. ಮೊಟ್ಟೆ ತಿನ್ನಬೇಕು ಎಂದುಕೊಂಡಿದ್ದ ಮಕ್ಕಳು ನಿರಾಸೆಯಿಂದ ತಗೆ ತಗ್ಗಿಸುತ್ತವೆ.