ಹೈದರಾಬಾದ್: ಮಿಚಾಂಗ್ ಎಂಬ ಚಂಡಮಾರುತದ ಅಬ್ಬರಕ್ಕೆ ತಮಿಳುನಾಡು ಹಾಗೂ ಆಂಧ್ರಪ್ರದೇಶದಲ್ಲಿ ಈವರೆಗೆ 12 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಭಾರಿ ಮಳೆ, ಬಿರುಗಾಳಿಯಿಂದಾಗಿ ಅನಾಹುತಗಳು ಸೃಷ್ಟಿಯಾಗುತ್ತಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಆಂಧ್ರದಲ್ಲಿ 140 ರೈಲು ಸಂಚಾರ ರದ್ದುಪಡಿಸಲಾಗಿದೆ. ಅಲ್ಲದೇ 40 ವಿಮಾನಗಳ ಹಾರಾಟವನ್ನು ರದ್ದು ಮಾಡಲಾಗಿದೆ.
ಬಿರುಗಾಳಿ ಸಹಿತ ಧಾರಾಕಾರ ಮಳೆಗೆ ತಮಿಳುನಾಡಿನ ಹಲವು ಪ್ರದೇಶಗಳು ಜಲಾವೃತಗೊಂಡಿವೆ. ಮಳೆ, ಬಿರುಗಾಳಿ ಅಬ್ಬರಕ್ಕೆ ವಿದ್ಯುತ್ ಕಂಬಗಳು ಬೃಹತ್ ಮರಗಳು ಧರಾಶಾಹಿಯಾಗಿವೆ. ಮನೆ, ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ಮೆಟ್ರೋ ಸ್ಟೇಷನ್ಗಳಿಗೂ ನೀರು ನುಗ್ಗಿದೆ. ಕಳೆದ ಎರಡು ದಿನಗಳಿಂದ ಚೆನ್ನೈ ನಗರದಲ್ಲಿ ವಿದ್ಯುತ್ ಕಡಿತಗೊಂಡಿದೆ.
ಜನಜೀವನ ಅಸ್ತವ್ಯಸ್ತವಾಗಿದೆ.
ಆಂಧ್ರಪ್ರದೇಶದ ಬಾಪ್ಟಾಲ ಕರಾವಳಿ ತೀರಕ್ಕೆ ಚಂಡಮಾರುತ ಅಪ್ಪಳಿಸಿದ್ದು, ಗಂಟೆಗೆ 110 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದೆ. ಆಂಧ್ರ ಕರಾವಳಿ ಜಿಲ್ಲೆಗಳಲ್ಲಿ ವರುಣಾರ್ಭಟ ಜೋರಾಗಿದ್ದು, 8 ಜಿಲ್ಲೆಗಳಲ್ಲಿ ಕಟ್ಟೆಚ್ಚರ ಘೋಷಿಸಲಾಗಿದೆ. ವರುಣಾರ್ಭಟಕ್ಕೆ ಮನೆ ಗೋಡೆ ಕುಸಿದು ಬಿದ್ದ ಪರಿಣಾಮ ತಿರುಪತಿಯಲ್ಲಿ ನಾಲ್ಕು ವರ್ಷದ ಬಾಲಕ ಸಾವನ್ನಪ್ಪಿದ್ದಾನೆ.