ಕೋಲಾರ: ಚಾಲಕನ ನಿಯಂತ್ರಣ ತಪ್ಪಿ ಆಂಧ್ರಪ್ರದೇಶದ ಖಾಸಗಿ ಬಸ್ ಪಲ್ಟಿಯಾಗಿ ದಂಪತಿ ದಾರುಣ ಸಾವನ್ನಪ್ಪಿ 15ಕ್ಕೂ ಹೆಚ್ಚು ಮಂದಿ ಗಾಯಗೊಂಡ ದಾರುಣ ಘಟನೆ ಬುಧವಾರ ಮುಂಜಾನೆ ಮುಳಬಾಗಿಲು ತಾಲೂಕಿನ ವಿರೂಪಾಕ್ಷಿ ಗೇಟ್ ಬಳಿ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ನಡೆದಿದೆ.
ಆಂಧ್ರಪ್ರದೇಶದ ವಿಜಯವಾಡದ ಷರೀಫ್, ಮೈಮುನ್ನಿಸಾ ಮೃತ ದಂಪತಿಯಾಗಿದ್ದಾರೆ.
ಗಾಯಗೊಂಡಿರುವ 15ಕ್ಕೂ ಹೆಚ್ಚು ಪ್ರಯಾಣಿಕರನ್ನು ಸ್ಥಳೀಯ ಆಸ್ಪತ್ರೆ ಕೋಲಾರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅವರಲ್ಲಿ ನಾಲ್ಕೈದು ಮಂದಿ ಸ್ಥಿತಿ ಗಂಭೀರವಾಗಿದೆ.
ಆಂಧ್ರದ ಗುಂಟೂರಿನಿಂದ ಬೆಂಗಳೂರಿಗೆ 5.30ರ ಸುಮಾರಿಗೆ ಬರುತ್ತಿದ್ದ ವೇಮುರಿ ಹೆಸರಿನ ಖಾಸಗಿ ಬಸ್ ಮಾರ್ಗ ಮಧ್ಯದ ಮುಳಬಾಗಲು ತಾಲೂಕಿನ ವಿರೂಪಾಕ್ಷಿ ಗೇಟ್ ಬಳಿ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ನಿದ್ದೆ ಮಂಪರಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಉರುಳಿಬಿದ್ದು ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಬಸ್ನಲ್ಲಿ 30 ಮಂದಿ ಪ್ರಯಾಣಿಕರಿದ್ದು ಉಳಿದವರು ಪಾರಾಗಿದ್ದಾರೆ.
ಅಪಘಾತ ಬಳಿಕ ಬಸ್ ಚಾಲಕ, ಕಂಡಕ್ಟರ್ ಪರಾರಿಯಾಗಿದ್ದು ಪ್ರಕರಣ ದಾಖಲಿಸಿರುವ ಮುಳಬಾಗಿಲು ಗ್ರಾಮಾಂತರ ಪೊಲೀಸರುಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.