ಬೆಂಗಳೂರು : ನೂತನವಾಗಿ ರಚನೆಯಾದ ಸಚಿವ ಸಂಪುಟದಲ್ಲಿ ಖಾತೆ ಬದಲಾವಣೆಗೆ ಪಟ್ಟು ಹಿಡಿದಿರುವ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರು ನಿನ್ನೆ ರಾತ್ರಿ ದಿಢೀರ್ ಆಗಿ ಹೊಸದಿಲ್ಲಿಗೆ ತೆರಳಿರುವುದು ಕುತೂಹಲಕ್ಕೆ ಕಾರಣವಾಗಿದೆ.
ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ವಿಜಯನಗರ ಜಿಲ್ಲೆಯಲ್ಲೇ ಉಳಿದಿದ್ದ ಆನಂದ್ ಅವರು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಪ್ರವಾಸದಲ್ಲಿದ್ದರು. ಆದರೆ, ಕರ್ನಾಟಕ ಬಿಜೆಪಿ ಉಸ್ತುವಾರಿ ಅರುಣ್ ಅವರ ಬುಲಾವ್ ಹಿನ್ನೆಲೆಯಲ್ಲಿ ಆನಂದ್ ಸಿಂಗ್, ಗೋವಾ ಮೂಲಕ ನಿನ್ನೆ ರಾತ್ರಿ ದಿಲ್ಲಿಗೆ ತೆರಳಿದ್ದಾರೆ. ಮೂಲಗಳ ಪ್ರಕಾರ ಅವರು ಅರುಣ್ ಸಿಂಗ್ ಅವರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆಂದು ಹೇಳಲಾಗಿದೆ.
ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಆ.4ರಂದು ಸಂಪುಟ ರಚನೆ ಮಾಡಿದ್ದರು. ಆನಂದ್ ಸಿಂಗ್ ಅವರಿಗೆ ಪ್ರವಾಸೋದ್ಯಮ ಮತ್ತು ಪರಿಸರ ಖಾತೆಯನ್ನು ಹಂಚಿಕೆ ಮಾಡಲಾಗಿತ್ತು. ಇದರಿಂದ ಅವರು ಮುನಿಸಿಕೊಂಡು ತಮ್ಮ ಖಾತೆಯನ್ನು ಬದಲಾವಣೆ ಮಾಡಬೇಕೆಂದು ಪಟ್ಟು ಹಿಡಿದಿದ್ದರು. ಒಂದು ಹಂತದಲ್ಲಿ ಸಚಿವ ಮತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆಯನ್ನೂ ನೀಡಲು ಮುಂದಾಗಿದ್ದರು.ಇದೀಗ ಆನಂದ್ ಸಿಂಗ್ ಅವರನ್ನು ದೆಹಲಿಗೆ ಕರೆಯಿಸಿ ಅವರ ಮನವೊಲಿಕೆಗೆ ಯತ್ನಿಸಲಾಗುತ್ತಿದೆ ಎನ್ನಲಾಗಿದೆ.