ಕಣ್ಣೀರಿನ ಹಿಂದಿರುವ ರಾಜ್ಯಪಾಲರ ‘ಧರ್ಮ’ ಸಂಕಟದ ಆಫ್ ದಿ ರೆಕಾರ್ಡ್ ಕತೆ..

Prasthutha|

– ನವೀನ್ ಸೂರಿಂಜೆ

- Advertisement -

ಘಟಿಕೋತ್ಸವದಲ್ಲಿ “ರಾಜ್ಯಪಾಲರ ದರ್ಬಾರ್ ಮತ್ತು ಉಪಕುಲಪತಿಗಳ ಕಣ್ಣೀರಿನ” ಹಿಂದೆ ಬೇರೆಯದ್ದೇ ಕತೆ ಇದೆ. ಸಹಜವಾಗಿ ಮೃದು ಸ್ವಭಾವದವರಾಗಿರುವ ರಾಜ್ಯಪಾಲರು ಈ ಒಂದು ವಿವಿ ಘಟಿಕೋತ್ಸವದಲ್ಲಿ ಮಾತ್ರ ಯಾಕೆ ಹೀಗೆ ‘ರೂಡ್’ ಆಗಿ ನಡೆದುಕೊಂಡರು ಎಂಬುದಕ್ಕೆ ಬಲವಾದ ಕಾರಣ ಇದೆ.

ಇದೊಂದು ಆಫ್ ದಿ ರೆಕಾರ್ಡ್ ಕಥೆ. ಯೂನಿವರ್ಸಿಟಿಗೆ ಉಪಕುಲಪತಿ ನೇಮಕ ಮಾಡಲು ರಾಜ್ಯ ಸರ್ಕಾರವು ಪ್ರೊ ಮುಜಾಫರ್ ಅಸಾದಿ ಹೆಸರನ್ನು ಅಂತಿಮಗೊಳಿಸಿ ಕಡತವನ್ನು ರಾಜಭವನಕ್ಕೆ ಕಳುಹಿಸಿತ್ತು. ಎಲ್ಲಾ ರೀತಿಯಿಂದಲೂ ಮುಜಾಫರ್ ಅಸಾದಿಯವರು ಉಪಕುಲಪತಿ ಹುದ್ದೆಗೆ ಅರ್ಹರಾಗಿದ್ದರು. ಮುಜಾಫರ್ ಅಸಾದಿಯವರ ಹೆಸರಿನ ಕಡತ ರಾಜಭವನಕ್ಕೆ ಹೋಗುತ್ತಿದ್ದಂತೆ ‘ಧರ್ಮ’ಕ್ಕಾಗಿ ಹೋರಾಡುತ್ತಿರುವ ಬಿಜೆಪಿ/ಆರ್ ಎಸ್ ಎಸ್ ನಿಂದ ರಾಜ್ಯಪಾಲರಿಗೆ ಒತ್ತಡ ಬರಲಾರಂಭಿಸಿದವು. ಯಾವ ಕಾರಣಕ್ಕೂ ಮುಜಾಫರ್ ಅಸಾದಿ ಹೆಸರಿಗೆ ಅಂಕಿತ ಹಾಕದಂತೆ ರಾಜ್ಯಪಾಲರಿಗೆ ಒತ್ತಡ ಹೇರಲಾರಂಬಿಸಿದರು. ರಾಜ್ಯಪಾಲರು ಮುಜಾಫರ್ ಅಸಾದಿಯವರ ಹಿನ್ನಲೆಯನ್ನು ಗುಪ್ತಚರ ಇಲಾಖೆಯಿಂದ ತರಿಸಿಕೊಂಡರು. ಒಂದೇ ಒಂದು ಕಪ್ಪುಚುಕ್ಕೆ ಇಲ್ಲದ, ಭ್ರಷ್ಟಾಚಾರ, ಸ್ವಜನಪಕ್ಷಪಾತ, ಅಧಿಕಾರ ದುರುಪಯೋಗ ನಡೆಸಿದ ಉದಾಹರಣೆಯೇ ಇಲ್ಲದ ಪ್ರೋ ಮುಜಾಫರ್ ಅಸಾದಿಯವರು ವಿವಿ ಉಪಕುಲಪತಿ ಹುದ್ದೆಗೆ ಅರ್ಹ ಮಾತ್ರವಲ್ಲ, ಅವರ ನೇಮಕವಾದರೆ ವಿವಿ ಮತ್ತು ಉಪಕುಲಪತಿ ಹುದ್ದೆಗೇ ಅದೊಂದು ಗೌರವವಾಗಿರುತ್ತೆ ಎಂದು ರಾಜ್ಯಪಾಲರಿಗೆ ಮನವರಿಕೆ ಆಗುತ್ತದೆ. ಆದರೇನು ಮಾಡೋದು ? ಮುಜಾಫರ್ ಅಸಾದಿ ನೇಮಕ ಮಾಡದಂತೆ ಆರ್ ಎಸ್ಎಸ್ ನ ಕೈಗಳು ರಾಜ್ಯಪಾಲರನ್ನು ಕಟ್ಟಿ ಹಾಕಿವೆ.‌ ಮನಸ್ಸಿಲ್ಲದ ಮನಸ್ಸಿನಿಂದ ರಾಜ್ಯಪಾಲರು ಮುಜಾಫರ್ ಅಸಾದಿಯವರ ಕಡತವನ್ನು ರಾಜ್ಯ ಸರ್ಕಾರಕ್ಕೆ ವಾಪಸ್ ಕಳಿಸಿದರು.

- Advertisement -

ಎರಡನೇ ಬಾರಿಯೂ ರಾಜ್ಯ ಸರ್ಕಾರ ಮುಜಾಫರ್ ಅಸಾದಿಯವರ ಹೆಸರಿನ ಕಡತವನ್ನೇ ರಾಜಭವನಕ್ಕೆ ಕಳಿಸಿದರೆ ರಾಜ್ಯಪಾಲರು ಒಪ್ಪಿಗೆ ಸೂಚಿಸಿ ಸಹಿ ಹಾಕಲೇಬೇಕಿರುತ್ತದೆ. ಅದು ರಾಜ್ಯ ಸರ್ಕಾರಕ್ಕೆ ಸಂವಿಧಾನ ನೀಡಿರುವ ಅವಕಾಶ. ಸಂವಿಧಾನದಲ್ಲಿ ರಾಜ್ಯಪಾಲರಿಗೆ ಇರುವ ಅಧಿಕಾರದ ಮಿತಿ ಅಷ್ಟೆ. ಇದ್ಯಾವುದರ ಪರಿವೆಯೇ ಇಲ್ಲದ ಆರ್ ಎಸ್ ಎಸ್ “ಯಾವ ಕಾರಣಕ್ಕೂ ಮುಜಾಫರ್ ಅಸಾದಿಯನ್ನು ವಿವಿ ಉಪಕುಲಪತಿಯಾಗಿ ನೇಮಿಸಕೂಡದು” ಎಂದು ರಾಜ್ಯಪಾಲರಿಗೆ ಸೂಚಿಸಿತ್ತು. ಒಂದು ವೇಳೆ ಇದನ್ನು ಮೀರಿಯೂ ಮುಜಾಫರ್ ಅಸಾದಿಯವರನ್ನೇ ವಿವಿ ಕುಲಪತಿಯನ್ನಾಗಿಸಿದರೆ ರಾಜ್ಯಪಾಲರನ್ನೇ ಬದಲಾಯಿಸುವ ಸಾಧ್ಯತೆ ಇತ್ತು. ಸರ್ಕಾರ ಎರಡನೇ ಬಾರಿಯೂ ಮುಜಾಫರ್ ಅಸಾದಿ ಹೆಸರಿನ ಕಡತವನ್ನೇ ಕಳುಹಿಸಲು ಯೋಜಿಸಿತ್ತು. ಈಗ ರಾಜ್ಯಪಾಲರು ‘ಧರ್ಮ ಸಂಕಟ’ದಲ್ಲಿ ಸಿಲುಕಿದರು.

ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಎನ್ನುವಂತೆ ರಾಜ್ಯಪಾಲರು ರಾಜಕೀಯವಾಗಿ ತನ್ನ ವಿರೋಧಿ ಪಕ್ಷದ ಮುಖ್ಯಮಂತ್ರಿಯ ಬಳಿ ಗೋಗರೆಯುವಂತಾಯಿತು. “ದಯವಿಟ್ಟು ಎರಡನೇ ಬಾರಿ ಅಸಾದಿಯವರ ಹೆಸರನ್ನು ಕಳುಹಿಸಬೇಡಿ. ಒಂದು ವೇಳೆ ನೀವು ಕಳಿಸಿದ್ದೇ ಆದರೆ ನಾನು ಅದಕ್ಕೆ ಸಹಿ ಹಾಕಬೇಕಾಗುತ್ತದೆ. ಹಾಗೊಂದು ವೇಳೆ ಸಹಿ ಹಾಕಿದ್ದೇ ಆದಲ್ಲಿ ಹಿಂದುಳಿದ ವರ್ಗದವನಾಗಿರುವ ನನ್ನ ಹುದ್ದೆಯಲ್ಲಿ ಒಬ್ಬ ಬ್ರಾಹ್ಮಣ ಕೂರುತ್ತಾನೆ. ನಾನು ಹುದ್ದೆ ಕಳೆದುಕೊಳ್ಳಬೇಕಾಗುತ್ತದೆ” ಎಂದು ಮುಖ್ಯಮಂತ್ರಿಯನ್ನು ಕೇಳಿಕೊಂಡರು. ಖುದ್ದು ರಾಜ್ಯಪಾಲರೇ ವೈಯುಕ್ತಿಕವಾಗಿ ಮನವಿ ಮಾಡಿದ್ದರಿಂದ ಎರಡನೇ ಬಾರಿ ಮುಜಾಫರ್ ಅಸಾದಿಯವರ ಹೆಸರನ್ನು ಮುಖ್ಯಮಂತ್ರಿಗಳು ಕಳುಹಿಸಲಿಲ್ಲ. ಅದೊಂದು ರಾಜಭವನ ಮತ್ತು ರಾಜ್ಯ ಸರ್ಕಾರದ ನಡುವಿನ ಅಲಿಖಿತವಾಗಿರುವ ಸೌಜನ್ಯದ ನಡೆಯಾಗಿತ್ತು. ರಾಜ್ಯಪಾಲರು ಹುದ್ದೆ ಉಳಿಸಿಕೊಂಡರು.

ರಾಜ ಭವನದ ಒಂದು ಫೋನ್ ಕರೆಗೆ ರಾಜ್ಯ ಸರ್ಕಾರ ಬೆಚ್ಚಿ ಬೀಳುತ್ತದೆ. ಅಂತದ್ದರಲ್ಲಿ ಹುದ್ದೆ ಉಳಿಸಿಕೊಳ್ಳಲು ರಾಜ್ಯ ಸರ್ಕಾರವನ್ನೇ ರಾಜ್ಯಪಾಲರು ರಿಕ್ವೆಸ್ಟ್ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಬಂತು. ರಾಜ್ಯಪಾಲರ ಈ ಪರಿಸ್ಥಿತಿಗೆ ಕಾರಣ ಉಪಕುಲಪತಿಯೊಬ್ಬ ಆರ್ ಎಸ್ ಎಸ್ ನಲ್ಲಿ ಹೊಂದಿದ್ದ ಪ್ರಭಾವ. ಅವಮಾನದಿಂದ ಕುಸಿದು ಹೋಗಿದ್ದ ರಾಜ್ಯಪಾಲರು ಸಮಯಕ್ಕಾಗಿ ಕಾಯುತ್ತಿದ್ದರು. ಅವರು ಈಗ ಸೀಮಿತ ಅಧಿಕಾರದ ರಾಜ್ಯಪಾಲರಾಗಿರಬಹುದು, ಅವರೊಳಗೆ ಈ ಹಿಂದೆ ಹಲವು ಬಾರಿ ಲೋಕಸಭೆ, ರಾಜ್ಯಸಭೆ ಸದಸ್ಯರಾಗಿದ್ದು ಕೇಂದ್ರ ಸಚಿವರೂ ಆಗಿದ್ದ ನುರಿತ ರಾಜಕಾರಣಿಯೊಬ್ಬನಿದ್ದ ! ಸಮಯ ಬಂದಿತ್ತು. ಘಟಿಕೋತ್ಸವದ ಬಹಿರಂಗ ಸಭೆಯಲ್ಲಿ ತನ್ನ ಪವರ್ ತೋರಿಸಿದರು. ಪ್ರಭಾವ ಬಳಸಿ ನೇಮಕಗೊಂಡ ವಿಸಿ ಬಹಿರಂಗ ಅವಮಾನ ಅನುಭವಿಸಿ ಕಣ್ಣೀರು ಹಾಕಬೇಕಾಯಿತು.

ಈಗ ಕಣ್ಣೀರು ಹಾಕಿದ ಉಪಕುಲಪತಿ ಪರವಾಗಿ ಹಲವರು ಕಣ್ಣೀರು ಸುರಿಸುತ್ತಿದ್ದಾರೆ. ಕಲಾ ವಿಭಾಗದ ಡೀನ್ ಒಬ್ಬರು ‘ನಾವು ಹೇಗೆ ಸಂಭ್ರಮದಿಂದ ಘಟಿಕೋತ್ಸವ ಸಿದ್ದತೆಗೊಳಿಸಿದ್ವಿ. ಆದರೆ ರಾಜ್ಯಪಾಲರು ಬಂದು ಹೇಗೆ ಹಾಳು ಮಾಡಿದರು’ ಎಂದು ಸುಧೀರ್ಘವಾಗಿ ಬರೆದಿದ್ದಾರೆ. ಕೊನೆಗೆ ‘ಪ್ರತಿಯೊಂದು ಸಂಸ್ಥೆಗೂ ಅದರದ್ದೇ ಆದ ಅಧಿಕಾರ, ಸ್ವಾತಂತ್ರ್ಯ, ಮೌಲ್ಯಗಳು ಇರುತ್ತದೆ. ಆ ಮೌಲ್ಯಗಳನ್ನು ನಾವು ರಕ್ಷಿಸಬೇಕಿದೆ’ ಎಂದು ಆಶಯ ವ್ಯಕ್ತಪಡಿಸಿದ್ದಾರೆ. ಪ್ರಗತಿಪರ ಚಿಂತಕರೊಬ್ಬರು ಅದಕ್ಕೆ ಸಹಮತ ವ್ಯಕ್ತಪಡಿಸಿ ರಾಜ್ಯಪಾಲರ ವಿರುದ್ದ ಕೇಂದ್ರ ಸರ್ಕಾರಕ್ಕೆ ನಿರ್ಣಯ ಕಳುಹಿಸಬೇಕು ಎಂದಿದ್ದಾರೆ.

ಈ ಮೌಲ್ಯಗಳು ಮತ್ತು ನಿರ್ಣಯಗಳು “ಮುಜಾಫರ್ ಅಸ್ಸಾದಿಯವರ ಕಡತವನ್ನು ವಾಪಸ್ ಕಳುಹಿಸುವಾಗ” ಎಲ್ಲಿ ಹೋಗಿತ್ತು. ಆಗ ಯಾಕೆ ಆ ಯೂನಿವರ್ಸಿಟಿ ಮತ್ತು ಚಿಂತಕರು ರಾಜ್ಯಪಾಲರ ವಿರುದ್ದ ಮಾತನಾಡಲಿಲ್ಲ. ಹೋಗಲಿ, ಆ ವಿಶ್ವವಿದ್ಯಾನಿಲಯವು ಮೂವರು ಬಹುಕೋಟಿ ಉದ್ಯಮಿಗಳಿಗೆ ಡಾಕ್ಟರೇಟ್ ಘೋಷಿಸಿ  ಸಾರ್ವಜನಿಕರಿಂದ ಛೀಮಾರಿಗೆ ಒಳಗಾದಾಗ ಆ ಸಂಸ್ಥೆಯ ‘ಮೌಲ್ಯ’ ಎಲ್ಲಿ ಹೋಗಿತ್ತು ?

ನಾವು ‘ಧರ್ಮ’ದ ಪರವಾಗಿ ಹೋರಾಡುವ ಮೊದಲು ‘ಧರ್ಮ’ದೊಳಗಿನ ಹುಳುಕುಗಳ ವಿರುದ್ದ ಹೋರಾಡಬೇಕಲ್ಲವೇ ? ರಾಜ್ಯಪಾಲರ ವಿರುದ್ದ ನಿರ್ಣಯ ಮಾಡಬೇಕಾಗಿರುವುದೇನೋ ಸರಿ, ರಾಜ್ಯಪಾಲರು ವಿವಿಗೆ ನೇಮಕಾತಿ ಮಾಡುವ ಸಂದರ್ಭದಲ್ಲೇ ಈ ನಿರ್ಣಯ ಮಾಡಿದ್ದರೆ  ಇವತ್ತು ನಾವ್ಯಾರು ಅಧರ್ಮದ ಬಗ್ಗೆ ‘ಕಣ್ಣೀರು’ ಹಾಕುವ ಪರಿಸ್ಥಿತಿಯೇ ಬರುತ್ತಿರಲಿಲ್ಲ.

ರಾಜ್ಯಪಾಲರ ವಿರುದ್ದ ಕಾನೂನುಬದ್ಧವಾಗಿ ಹೋರಾಡೋಣಾ/ಮಾತಾಡೋಣಾ. ಆದರೆ ಒಂದು ಕ್ಲಾರಿಟಿ ಇರಲಿ. ಈ ಹೋರಾಟ/ಮಾತಿನಲ್ಲಿ, ಯೂನಿವರ್ಸಿಟಿ ಉಳಿಸುವುದು ಮಾತ್ರ ನಮ್ಮ ಧರ್ಮವಾಗಲಿ
‘ಧರ್ಮ’ ಉಳಿಸುವುದು ನಮ್ಮ ಧರ್ಮವಲ್ಲ !

Join Whatsapp