ಕಾವೇರಿ ಕುರಿತಂತೆ ಸಮಾಧಾನಕರ ಪರಿಹಾರ ಕಾಣಬೇಕಿದೆ : ನಟ ಶಿವರಾಜ್ ಕುಮಾರ್

Prasthutha|

ಬೆಂಗಳೂರು: ಸ್ಯಾಂಡಲ್ ವುಡ್ ತಾರೆಯರ ಮೇಲೆ ಕಾವೇರಿ ಹೋರಾಟಗಾರರು ಮುಗಿ ಬೀಳುತ್ತಿದ್ದಂತೆಯೇ ಒಬ್ಬೊಬ್ಬರೇ ಈ ಕುರಿತು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಕನ್ನಡ ನಾಡು, ನುಡಿ, ಜಲದ ಬಗ್ಗೆ ಸದಾ ಅಪಾರ ಗೌರವವನ್ನು ಇಟ್ಟುಕೊಂಡು ಬಂದಿರುವ ಡಾ.ರಾಜ್ ಕುಮಾರ್ ಕುಟುಂಬ ಕೂಡ ಕಾವೇರಿ ಕುರಿತಂತೆ ಪ್ರತಿಕ್ರಿಯೆ ನೀಡಿದೆ. ಬೆಳಗ್ಗೆಯಷ್ಟೇ ರಾಘವೇಂದ್ರ ರಾಜಕುಮಾರ್ ಮಾತನಾಡಿದ್ದರು. ಇದೀಗ ಶಿವರಾಜ್ ಕುಮಾರ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.

- Advertisement -

 ‘ರೈತನ ಬೆನ್ನೆಲುಬು ಕಾವೇರಿ. ರಾಜ್ಯದಲ್ಲಿ ಈಗಾಗಲೇ ಮಳೆಯ ಅಭಾವ ಇರುವ ಕಾರಣದಿಂದಾಗಿ ರೈತರು ಸಂಕಷ್ಟದಲ್ಲಿದ್ದಾರೆ. ಹಾಗಾಗಿ ಎರಡು ರಾಜ್ಯಗಳ ನಾಯಕರು, ನ್ಯಾಯಾಲಯ ಇದಕ್ಕೊಂದು ಸಮಾಧಾನಕರ ಪರಿಹಾರವನ್ನು ಕಂಡುಕೊಳ್ಳಬೇಕಿದೆ. ಇದು ನನ್ನ ಪ್ರಾರ್ಥನೆ ಕೂಡ ಆಗಿದೆ” ಎಂದಿದ್ದಾರೆ.

ಹಲವು ದಿನಗಳಿಂದ ಮಂಡ್ಯ ಭಾಗದ ರೈತರು ಕಾವೇರಿ ಹೋರಾಟದಲ್ಲಿ ತೊಡಗಿಕೊಂಡಿದ್ದಾರೆ. ರೈತರು, ರೈತ ಸಂಘಗಳು ಮತ್ತು ಕನ್ನಡಪರ ಹೋರಾಟಗಾರು ಈ ಕಾವೇರಿ ಹೋರಾಟದಲ್ಲಿ ಪಾಲ್ಗೊಂಡಿದ್ದರೂ, ಕನ್ನಡ ಸಿನಿಮಾ ರಂಗದವರು ಮಾತ್ರ ಮೌನವಹಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿತ್ತು. ಇವತ್ತು ಹಲವು ಕಡೆ ಚಿತ್ರರಂಗದವರ ವಿರುದ್ಧ ಪ್ರತಿಭಟನೆ ಕೂಡ ಮಾಡಿದ್ದರು. ವಿರೋಧದ ಹೋರಾಟ ಹೆಚ್ಚಾಗುತ್ತಿದ್ದಂತೆಯೇ ಒಬ್ಬೊಬ್ಬ ನಟರು ಸೋಷಿಯಲ್ ಮೀಡಿಯಾ ಮೂಲಕ ಹೋರಾಟಕ್ಕೆ ಬೆಂಬಲ ಸೂಚಿಸುತ್ತಿದ್ದಾರೆ.

- Advertisement -

ಬೆಳಗ್ಗೆ ನಟ ದರ್ಶನ್ ಟ್ವೀಟ್ ಮಾಡಿ, ‘ಕರ್ನಾಟಕದ ಪಾಲಿನ ಕಾವೇರಿ ನೀರಿಗೆ ಕತ್ತರಿ ಹಾಕಿ, ಮತ್ತಷ್ಟು ನೀರು ಪಡೆದುಕೊಳ್ಳುವ ಪ್ರಯತ್ನ ನಿರಂತರವಾಗಿ ನಡೆದು ಬಂದಿದೆ. ಈ ವರ್ಷ ನೀರಿನ ಅಭಾವ ರಾಜ್ಯದಲ್ಲಿ ಸಾಕಷ್ಟಿದೆ. ಈ ಸಮಯದಲ್ಲಿ ನೀರಾವರಿ ಪ್ರದೇಶಕ್ಕೆ ಹಾನಿಯಾಗುವ ಸಾಧ್ಯತೆ ಬಹಳಷ್ಟು ಇರುವ ಕಾರಣ ಎಲ್ಲಾ ಅಂಕಿ ಅಂಶಗಳನ್ನು ಪರಿಗಣಿಸಿ ಆದಷ್ಟು ಬೇಗ ನ್ಯಾಯ ಸಿಗುವಂತಾಗಲಿ’ ಎಂದು ಬರೆದಿದ್ದರು.

ಕೆಲ ಗಂಟೆಗಳ ಹಿಂದೆ ಸುದೀಪ್ ಕೂಡ ಟ್ವೀಟ್ ಮಾಡಿದ್ದು, ‘ಸ್ನೇಹಿತರೆ, ನಮ್ಮ ಕಾವೇರಿ ನಮ್ಮ ಹಕ್ಕು. ಅಷ್ಟು ಒಮ್ಮತದಿಂದ ಗೆಲ್ಲಿಸಿರುವ ಸರ್ಕಾರ ಕಾವೇರಿಯನ್ನೇ ನಂಬಿರುವ ಜನರನ್ನು ಕೈಬಿಡುವುದಿಲ್ಲ ಎಂದು  ನಾನು ನಂಬಿದ್ದೇನೆ . ಈ ಕೂಡಲೇ ತಜ್ಞರು ಕಾರ್ಯತಂತ್ರ ರೂಪಿಸಿ ನ್ಯಾಯ ನೀಡಲಿ ಎಂದು ಒತ್ತಾಯಿಸುತ್ತೇನೆ . ನೆಲ -ಜಲ -ಭಾಷೆಯ ಹೋರಾಟದಲ್ಲಿ ನನ್ನ ಧ್ವನಿಯೂ ಇದೆ. ಕಾವೇರಿ ತಾಯಿ ಕರುನಾಡನ್ನು ಕಾಪಾಡಲಿ’ ಎಂದು ಹೋರಾಟಕ್ಕೆ ಬೆಂಬಲ ಸೂಚಿಸಿದ್ದರು.



Join Whatsapp