ಬೆಂಗಳೂರು; ಸೊಸೈಟಿ ಫಾರ್ ಪ್ರೊಟೆಕ್ಷನ್ ಆಫ್ ಪ್ಲಾಂಟ್ಸ್ ಆ್ಯಂಡ್ ಅನಿಮಲ್ಸ್ (ಎಸ್.ಪಿ.ಪಿ.ಎ) ಸಂಸ್ಥಾಪಕ ಧ್ರುವ್ ಪಾಟೀಲ ವಿಜಯಪುರದ ಅಪರೂಪದ ವನ್ಯಜೀವಿಗಳನ್ನು ಬೆಳಕಿಗೆ ತರುತ್ತಿದ್ದು, ಇದೀಗ ಜಿಲ್ಲೆಯ ಇಂಡಿ ತಾಲ್ಲೂಕು ಕೃಷ್ಣ ಮೃಗಗಳ ಆವಾಸಸ್ಥಾನವಾಗಿರುವುದನ್ನು ಪತ್ತೆ ಮಾಡಿದ್ದಾರೆ. ವಿಶೇಷವಾಗಿ ಇಂಡಿ ತಾಲ್ಲೂಕನ್ನು “ಕೃಷ್ಣ ಮೃಗಗಳ ಪತ್ಯೇಕ ವನ್ಯಜೀವಿತಾಣ”ವನ್ನಾಗಿ ರೂಪಿಸಬೇಕೆಂದು ಹೇಳಿದ್ದಾರೆ.
ಇಂಡಿ ತಾಲ್ಲೂಕಿನಲ್ಲಿ ಕಳೆದ ಎರಡು ವರ್ಷಗಳ ಹಿಂದೆ ಕೇವಲ ಎರಡು ಕೃಷ್ಣ ಮೃಗಗಳಿದ್ದವು, ಆದರೆ ಇದೀಗ ಇವುಗಳ ಸಂಖ್ಯೆ ವಿಸ್ಮಯಕಾರಿಯಾಗಿ 300ಕ್ಕೆ ಏರಿಕೆಯಾಗಿವೆ. ಕೃಷ್ಣ ಮೃಗಗಳು ಇಷ್ಟೊಂದು ಕಡಿಮೆ ಸಮಯದಲ್ಲಿ ಗಣನೀಯವಾಗಿ ಏರಿಕೆಯಾಗಿರುವುದು ಮಹತ್ವದ ಬೆಳವಣಿಗೆಯಾಗಿದೆ. ತನ್ನದೆ ಆದ ಇತಿಹಾಸ ಅಥವಾ ಅತಿಯಾದ ತಾಪಮಾನಕ್ಕೆ ಹೆಸರುವಾಸಿಯಾದ ಜಿಲ್ಲೆ ವಿಜಯಪುರದಲ್ಲಿ ವನ್ಯಜೀವಿಗಳ ಸಂರಕ್ಷಣೆ ಮಾಡುವುದು ಅತ್ಯಂತ ಅಗತ್ಯವಾಗಿದೆ ಎಂದರು.
ಮಾಜಿ ಗೃಹ ಮತ್ತು ಜಲ ಸಂಪನ್ಮೂಲ ಸಚಿವ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಎಂ.ಬಿ. ಪಾಟೀಲ್ ಅವರ ಪುತ್ರ ದ್ರುವ್ ಪಾಟೀಲ ಸುದ್ದಿಗೋಷ್ಠಿಯಲ್ಲಿ ಕೃಷ್ಣ ಮೃಗ ತಾಣಗಳ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿದರು. ಅಳಿವಿನಂಚಿನಲ್ಲಿರುವ ಕೃಷ್ಣಮೃಗಗಳನ್ನು ರಕ್ಷಿಸಲು ವಿಜಯಪುರದಲ್ಲಿ ರಾಜ್ಯ ಅರಣ್ಯ ಇಲಾಖೆಯೊಂದಿಗೆ ಸೊಸೈಟಿ ಫಾರ್ ಪ್ರೊಟೆಕ್ಷನ್ ಆಫ್ ಪ್ಲಾಂಟ್ಸ್ ಅಂಡ್ ಅನಿಮಲ್ಸ್ ಪರಿಣಾಮಕಾರಿ ಮಾರ್ಗಗಳನ್ನು ರೂಪಿಸಿದೆ. ಇಂಡಿ ತಾಲೂಕಿನ ಐದು ಗ್ರಾಮಗಳಲ್ಲಿ 300 ಕ್ಕೂ ಹೆಚ್ಚು ಕೃಷ್ಣಮೃಗಗಳು (antilopecervicapra) ಕಾಣಿಸಿಕೊಂಡಿದ್ದು, ಇವುಗಳ ಸಂರಕ್ಷಣೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಲಾಗಿದೆ ಎಂದರು.
ಹುಲಿಗಳು ಮತ್ತು ಆನೆಗಳಂತೆಯೇ ವನ್ಯಜೀವಿ (ರಕ್ಷಣೆ) ಕಾಯಿದೆ, 1972ರ 1ರ ಅಡಿಯಲ್ಲಿ ಕೃಷ್ಣಮೃಗಗಳು ಕೂಡ ಇದೆ ಕಾನೂನಿನ ಅಡಿಯಲ್ಲಿ ಸಂರಕ್ಷಿತವಾಗಿವೆ. ಅಳಿವಿನಂಚಿನಲ್ಲಿರುವ ಕೃಷ್ಣಮೃಗಗಳ ಉಳಿವು ಜಿಲ್ಲೆಯ ರೈತರೊಂದಿಗೆ ಸಹಬಾಳ್ವೆಯ ಮೇಲೆ ಅವಲಂಬಿತವಾಗಿದೆ. ಇಲ್ಲಿಯವರೆಗೆ ಕೃಷ್ಣಮೃಗಗಳಿಗಾಗಿ ಯಾವುದೇ ಸಂರಕ್ಷಿತ ಮೀಸಲು ಇಲ್ಲದಿರುವುದರಿಂದ ಕೃಷ್ಣಮೃಗಗಳು ಬೇಟೆಗೆ ಗುರಿಯಾಗುತ್ತವೆ. ಕೃಷ್ಣಮೃಗಗಳು ದ್ರಾಕ್ಷಿತೋಟಗಳಿಗೆ ಹಾರಿ ಬೆಳೆಗಳನ್ನು ತಿನ್ನುವುದರಿಂದ ರೈತರ ಸಂಕಷ್ಟಕ್ಕೆ ಕಾರಣವಾಗಿದೆ ಎಂದರು.
ವಿಜಯಪುರ ಜಿಲ್ಲೆಯ ರೈತರು ಇಲ್ಲಿಯವರೆಗೂ ಕೃಷ್ಣಮೃಗಗಳ ಸ್ವಚ್ಛಂದ ಬದುಕಿನಲ್ಲಿ ಹಸ್ತಕ್ಷೇಪ ಮಾಡಿಲ್ಲ, ಏಕೆಂದರೆ ಅವುಗಳು ಧಾರ್ಮಿಕವಾಗಿ ಮಹತ್ವದ್ದಾಗಿವೆ ಮತ್ತು ದೇವರಾದ ಕೃಷ್ಣನ ಮೃಗಗಳು ಎಂದೇ ಪರಿಗಣಿಸಲಾಗಿದೆ. ಆದರೆ, ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿರುವ ಈ ಪ್ರಾಣಿಗಳು ತಮ್ಮ ಹೊಲಗಳಿಗೆ ನುಗ್ಗಿ ಬೆಳೆಗಳನ್ನು ನಾಶಪಡಿಸುವುದನ್ನು ತಡೆಯಲು ರೈತರು ಈಗ ವಿದ್ಯುತ್ ಬೇಲಿಗಳನ್ನು ಅಳವಡಿಸುತ್ತಿದ್ದಾರೆ. ಇದು ಭವಿಷ್ಯದಲ್ಲಿ ಬ್ಲ್ಯಾಕ್ ಬಕ್ ಗಳ ಪಾಲಿಗೆ ಮಾರಣಾಂತಿಕ ಗಾಯಕ್ಕೆ ಕಾರಣವಾಗ ಬಹುದು ಎಂದು ದ್ರುವ ಪಾಟೀಲ್ ಕಳವಳ ವ್ಯಕ್ತಪಡಿಸಿದರು.
ವಿಜಯಪುರದ ಅರಣ್ಯಾಧಿಕಾರಿಗಳೊಟ್ಟಿಗೆ ಸೇರಿ ಈಗಾಗಲೇ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಿಜಯಕುಮಾರ ಗೋಗಿ ಅವರನ್ನು ತಮ್ಮ ಸಂಸ್ಥೆಯ ನಿಯೋಗದ ಮೂಲಕ ಭೇಟಿ ಮಾಡಿ, ಕೃಷ್ಣಮೃಗಗಳ ಈ ಜ್ವಲಂತ ಸಮಸ್ಯೆಯ ಬಗ್ಗೆ ಮಾಹಿತಿ ನೀಡಿದ್ದೇವೆ. ವಿಜಯಪುರ ಜಿಲ್ಲಾಡಳಿತದೊಂದಿಗೆ ಸೇರಿ ಕೃಷ್ಣಮೃಗಗಳನ್ನು ರಕ್ಷಿಸಲು ಖಾಸಗಿ ಹಾಗೂ ಸರ್ಕಾರದ ಸಹಭಾಗಿತ್ವದಲ್ಲಿ ಸಂರಕ್ಷಿತ ಅರಣ್ಯ ನಿರ್ಮಿಸಲು ಯೋಜನೆಯನ್ನು ರೂಪಿಸಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಪ್ರಸ್ತುತ, ಈ ಬ್ಲ್ಯಾಕ್ಬಕ್ಸ್ಗಳು ಯಾವುದೇ ಅಡೆತಡೆ ಇಲ್ಲದೇ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದಿದ್ದು ಬೇಟೆಯಾಡಲು ಯಾವುದೇ ಪರಭಕ್ಷಕಗಳಿಲ್ಲದ ಕಾರಣ ಆರೋಗ್ಯಕರ ಜನಸಂಖ್ಯೆಯಲ್ಲಿ ಬೆಳೆಯುತ್ತಿವೆ. ಆದರೆ ಮುಂಬರುವ ದಿನಗಳಲ್ಲಿ ಮಾನವ ಚಟುವಟಿಕೆ, ಹೆದ್ದಾರಿ ಅಪಘಾತಗಳು, ಬೇಟೆಯಾಡುವುದು ಮತ್ತು ವಿದ್ಯುತ್ ಆಘಾತಗಳಂತಹ ಅಪಾಯ ಈ ಸಂರಕ್ಷಿತ ಪ್ರಭೇದಗಳಿಗೆ ತಪ್ಪಿದ್ದಲ್ಲ. ಅಳಿವಿನಂಚಿನಲ್ಲಿರುವ ಈ ಅಪರೂಪದ ಮತ್ತು ವಿಶಿಷ್ಟ ಪ್ರಭೇದಗಳಿಗೆ ಸರ್ಕಾರ ಮತ್ತು ಅರಣ್ಯ ಇಲಾಖೆಯು ಸಮುದಾಯ ಮೀಸಲು ರಚಿಸಿದರೆ, ವಿಜಯಪುರ ದೇಶಕ್ಕೆ ಆರೋಗ್ಯಕರ ಕೃಷ್ಣಮೃಗಗಳ ಸಂತತಿಗೆ ಕೊಡುಗೆ ನೀಡಿದ ಗೌರವ ಕೇಂದ್ರವಾಗತ್ತದೆ ಎಂದರು.