SDPI ದಕ್ಷಿಣ ಕನ್ನಡ ಜಿಲ್ಲಾ ಕಚೇರಿಯಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಧ್ವಜಾರೋಹಣ

Prasthutha|

ಮಂಗಳೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಧ್ವಜಾರೋಹಣ ಕಾರ್ಯಕ್ರಮವನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದಕ್ಷಿಣ ಕನ್ನಡ ಜಿಲ್ಲಾ ಕಚೇರಿಯ ಮುಂಭಾಗ ಆಯೋಜಿಸಲಾಗಿತ್ತು.

- Advertisement -

ಎಸ್ ಡಿಪಿಐ ಜಿಲ್ಲಾ ಉಪಾಧ್ಯಕ್ಷೆ ಮಿಸ್ರಿಯಾ ಕಣ್ಣೂರು ಧ್ವಜಾರೋಹಣ ನೆರವೇರಿಸಿ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 75 ವರ್ಷಗಳು ಕಳೆದಿದ್ದರೂ ದೇಶದಲ್ಲಿ ತಾರತಮ್ಯ, ಅಸಮಾನತೆ, ಬಡತನ ಮುಂತಾದ ಸಮಸ್ಯೆಗಳು ಇನ್ನೂ ತಾಂಡವವಾಡುತ್ತಿವೆ. ಸಂವಿಧಾನದ ಆಶಯದಂತೆ ಆಡಳಿತ ನಡೆಸಬೇಕಾದ ಕೇಂದ್ರದ ಬಿಜೆಪಿ ಸರ್ಕಾರ, ಬಂಡವಾಳಶಾಹಿಗಳ ಪರವಾಗಿ ಬಡವರ ವಿರುದ್ಧವಾಗಿ ನೀತಿ ನಿಯಮಗಳನ್ನು ರೂಪಿಸಿ ಬಡವರನ್ನು ಶೋಷಿಸುತ್ತಿದೆ. ಬಡವರ ಅಗತ್ಯ ಆಹಾರ ಪದಾರ್ಥಗಳ ಮೇಲೆಯೂ ಜಿಎಸ್ ಟಿ ವಿಧಿಸಿ ಅವರ ರಕ್ತ ಹೀರುತ್ತಿದೆ. ಫ್ಯಾಶಿಸ್ಟ್ ಸರ್ಕಾರದಿಂದ ದೇಶದ ಸಂವಿಧಾನಕ್ಕೆ ಅಪಾಯ ಎದುರಾಗಿದ್ದು, ಯಾವುದೇ ಬೆಲೆ ತೆತ್ತಾದರೂ ಭಾರತೀಯರು ಸಂವಿಧಾನವನ್ನು ರಕ್ಷಿಸಲು ಪಣ ತೊಡಬೇಕು ಎಂದು ಕರೆ ನೀಡಿದರು.

ಇಂದು ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿಯೂ ದೇಶದಲ್ಲಿ ಜ್ವಲಂತ ಸಮಸ್ಯೆಗಳು ತಾಂಡವವಾಡುತ್ತಿವೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಮೂಲಕ ಸರಕಾರಗಳು ಜನದ್ರೋಹಿ ಧೋರಣೆಗಳನ್ನು ತಾಳುತ್ತಿವೆ. ಮಹಿಳೆಯರು, ಪುಟ್ಟ ಮಕ್ಕಳ ಆಹಾರಕ್ಕೂ ಅಧಿಕ ಜಿಎಸ್ ಟಿ ವಿಧಿಸುವ ಮೂಲಕ ಸರಕಾರಗಳು ಜನವಿರೋಧಿ ನೀತಿಗಳನ್ನು ಅನುಸರಿಸುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಪಾಯ ಎಂದರು.

- Advertisement -

 ಮುಖ್ಯ ಅತಿಥಿ ಭಾಷಣ ಮಾಡಿದ SDPI ರಾಜ್ಯ ಸಮಿತಿ ಸದಸ್ಯ ಜಲೀಲ್ ಕ್ರಷ್ಣಾಪುರ, ಹಲವಾರು ಮಹನೀಯರು ತ್ಯಾಗ, ಬಲಿದಾನಗಳ ಮೂಲಕ ದೊರಕಿಸಿಕೊಟ್ಟ ಸ್ವಾತಂತ್ರ್ಯವನ್ನು ಇಂದು ಸರಕಾರಗಳು ದುರುಪಯೋಗ ಪಡಿಸಿಕೊಂಡು ಬಡವರನ್ನು ಶೋಷಣೆಗೆ ಒಳಪಡಿಸುವ ಕೆಲಸವನ್ನು ಮಾಡುತ್ತಿವೆ. ಇದರ ವಿರುದ್ಧ ಹೋರಾಟ ಮಾಡಬೇಕೆಂದು ಕರೆ ನೀಡಿದರು

 ಸಮಾರೋಪ ಭಾಷಣವನ್ನು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದತ್ ಬಜತ್ತೂರು ಮಾಡಿದರು. ಜಿಲ್ಲಾ ಕಾರ್ಯದರ್ಶಿ ಸುಹೈಲ್ ಖಾನ್ ಸ್ವಾಗತಿಸಿದರು. ಮಂಗಳೂರು ದಕ್ಷಿಣ ಕ್ಷೇತ್ರದ ಕಾರ್ಯದರ್ಶಿ ಅಕ್ಬರ್ ರಾಝಾ ಕಾರ್ಯಕ್ರಮ ನಿರೂಪಿಸಿದರು

ಪಕ್ಷದ ರಾಜ್ಯ ಸಮಿತಿ ಸದಸ್ಯ ಜಲೀಲ್ ಕೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದತ್ ಬಜತ್ತೂರು, ಜಿಲ್ಲಾ ಕಾರ್ಯದರ್ಶಿ ಸುಹೈಲ್  ಖಾನ್, ದಕ್ಷಿಣ ವಿಧಾನಸಭಾ ಕ್ಷೇತ್ರ ಕಾರ್ಯದರ್ಶಿ ಅಕ್ಬರ್ ಕುದ್ರೋಳಿ ಮತ್ತಿತರರು ಭಾಗವಹಿಸಿದ್ದರು.

Join Whatsapp