ಪ್ರಜ್ವಲ್ ರೇವಣ್ಣಗೆ ಶಿಕ್ಷೆಯಾಗಬೇಕು ಎಂದ ಅಮಿತ್ ಶಾ, ಗೃಹ ಸಚಿವರ ಯೋಗ್ಯತೆ ಪ್ರಶ್ನಿಸಿದ ಸಿದ್ದರಾಮಯ್ಯ

Prasthutha|

ಬೆಂಗಳೂರು: ಮೊದಲು ಪ್ರಜ್ವಲ್ ರೇವಣ್ಣ ನಿರಪರಾಧಿ ಎಂದಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಹುಬ್ಬಳ್ಳಿಯಲ್ಲಿ ಲೋಕಸಭಾ ಚುನಾವಣಾ ಭಾಷಣದಲ್ಲಿ, ಪ್ರಜ್ವಲ್ ರೇವಣ್ಣ ವಿಚಾರವನ್ನು ಪ್ರಸ್ತಾಪಿಸಿ ಆತನಿಗೆ ಶಿಕ್ಷೆಯಾಗಬೇಕು ಎಂದಿದ್ದಾರೆ. ಅಮಿತ್ ಶಾ ಅವರ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ಅಮಿತ್ ಶಾ ಅವರೇ, ಅಂತಿಮವಾಗಿ ಪ್ರಜ್ವಲ್ ರೇವಣ್ಣ ವಿಷಯದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಕ್ಕೆ ಧನ್ಯವಾದಗಳು. ಮಹಿಳೆಯರ ಮೇಲಿನ ದೌರ್ಜನ್ಯವನ್ನು ನಿಮ್ಮ ಮಿತ್ರರು ಮಾಡಿದರೂ ಸಹ ನೀವು ಕ್ಷಮಿಸುವುದಿಲ್ಲ ಎಂದು ಹೇಳಿದ್ದೀರಿ. ಆದರೆ ನಿಮ್ಮ ಮಾತು ಎಷ್ಟು ಸತ್ಯ ಎನ್ನುವುದು ನಿಮ್ಮ ನಡವಳಿಕೆ ತೋರಿಸುತ್ತದೆ ಎಂದು ಟಾಂಗ್ ನೀಡಿದ್ದಾರೆ.

- Advertisement -

ನಿಮ್ಮ ಸಂಸದರಿಂದ ಒಲಿಂಪಿಯನ್ ಹುಡುಗಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದನ್ನು ನಾವು ಮರೆಯಬಹುದೇ? ನೀವು ಯಾರೊಂದಿಗೆ ನಿಂತಿದ್ದೀರಿ? ನಿಮ್ಮ ಸಂಸದರ ಜೊತೆ ಅಲ್ಲವೇ? ಮಹಿಳಾ ಕ್ರೀಡಾಪಟುಗಳನ್ನು ವಾರಗಟ್ಟಲೆ ದೆಹಲಿಯ ಬೀದಿಗಳಲ್ಲಿ ಪ್ರತಿಭಟನೆಗೆ ಕುಳಿತುಕೊಳ್ಳಲು ಅವಕಾಶ ನೀಡಿದ್ದವರು ನೀವು ಎಂದಿದ್ದಾರೆ.

ಬಿಲ್ಕಿಸ್ ಬಾನು ಅತ್ಯಾಚಾರಿಗಳನ್ನು ಗುಜರಾತ್ ಬಿಜೆಪಿ ಸರ್ಕಾರ ಆಗಾಗ ಪೆರೋಲ್‌ನಲ್ಲಿ ಬಿಡುಗಡೆ ಮಾಡುತ್ತಾ ಕೊನೆಗೆ ಕೇಸ್ ಡಿಲೀಟ್ ಮಾಡಿಸಿ ಶಾಸ್ವತ ಬಿಡುಗಡೆ ಮಾಡಿತ್ತು. ನಿಮ್ಮ ಪಕ್ಷದವರು ಅವರಿಗೆ ಹೂಮಾಲೆ ಹಾಕಿದ್ದನ್ನು ನಾವು ಮರೆಯಬಹುದೇ? ನಿಮ್ಮ ಪಕ್ಷದ ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿಲ್ಲವೇ ಎಂದು ಸಿದ್ದರಾಮಯ್ಯ ಅಮಿತ್ ಶಾರನ್ನು ಪ್ರಶ್ನಿಸಿದ್ದಾರೆ.

- Advertisement -

ಅಪ್ರಾಪ್ತ ದಲಿತ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಹತ್ಯೆಗೈದ ಉನ್ನಾವೋ ಪ್ರಕರಣದಲ್ಲಿ ನಿಮ್ಮ ಪಕ್ಷವು ದುಷ್ಕರ್ಮಿಗಳ ಬೆನ್ನಿಗೆ ನಿಂತಿದ್ದನ್ನು ನಾವು ಮರೆಯಬಹುದೇ ಎಂದು ಸಿದ್ದರಾಮಯ್ಯ ಕೇಳಿದ್ದಾರೆ.

ಹತ್ರಾಸ್ ಪ್ರಕರಣದಲ್ಲಿ ನಿಮ್ಮ ಪಕ್ಷವು ಅತ್ಯಾಚಾರದ ಅಪರಾಧಿಗಳನ್ನು ಹೇಗೆ ಸಮರ್ಥಿಸಿತು ಎಂಬುದನ್ನು ನಾವು ಮರೆಯಬಹುದೇ ಎಂದು ಸಿಎಂ ಪ್ರಶ್ನಿಸಿದ್ದಾರೆ.

ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿಸಿದಾಗ ಬಿಜೆಪಿಯವರು ಕಣ್ಣು ಮುಚ್ಚಿದ್ದನ್ನು ಮರೆಯಬಹುದೇ? ರಾಷ್ಟ್ರದ ಮಹಿಳೆಯರಿಗೆ ಸತ್ಯ ತಿಳಿದಿದೆ ಮತ್ತು ನೀವು ಕೂಡ ವಾಸ್ತವ ತಿಳಿದುಕೊಳ್ಳಿ ಸಿಎಂ ಸಿದ್ದರಾಮಯ್ಯ ಎಂದಿದ್ದಾರೆ.



Join Whatsapp