ಕ್ರಿಕೆಟ್ ಸ್ಟೇಡಿಯಂ ವಿವಾದಕ್ಕೆ ಸೌಹಾರ್ದಯುತ ಪರಿಹಾರ; ಭೂಮಿ -ವಸತಿ ಹಕ್ಕು ವಂಚಿತರ ಹೋರಾಟಕ್ಕೆ ಜಯ

Prasthutha|

ಮಡಿಕೇರಿ: ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (ಕೆ.ಎಸ್.ಸಿ.ಎ) ಗೆ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ ಮಾಡಲು ಕೊಡಗು ಜಿಲ್ಲಾಡಳಿತ ಗುರುತಿಸಿ ಮಂಜೂರು ಮಾಡಿದ ಜಾಗದಲ್ಲಿ ಪರಿಶಿಷ್ಟ ಜಾತಿ – ಪಂಗಡ ಹಾಗೂ ಹಿಂದುಳಿದ ವರ್ಗದ ಸ್ಮಶಾನ ಜಾಗವು ಒಳಗೊಂಡಿದೆ ಎಂದು ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿ ಹೋರಾಟಕ್ಕೆ ಮುಂದಾಗಿತ್ತು. ಕಳೆದ 5 ವರ್ಷದಿಂದ ನಡೆಯುತ್ತಿದ್ದ ಹೋರಾಟಕ್ಕೆ ಇದೀಗ ತಾರ್ಕಿಕ ಮುಕ್ತಿ ದೊರೆತಿದೆ.

- Advertisement -

2015 ರಲ್ಲಿ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಕೆ.ಎಸ್.ಸಿ.ಎ ಅನುಮೋದನೆ ನೀಡಿತ್ತು. ಇದಕ್ಕಾಗಿ ಜಾಗದ ಹುಡುಕಾಟ ನಡೆದು, ಕೊಡಗು ಜಿಲ್ಲಾಡಳಿತ ಮಡಿಕೇರಿ ತಾಲೂಕಿನ ಹೊದ್ದೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಪಾಲೆಮಾಡಿನಲ್ಲಿ 12.70 ಎಕರೆ ಜಾಗವನ್ನು ಗುರುತಿಸಿ ಮಂಜೂರು ಮಾಡಿತ್ತು. ಇದಕ್ಕೆ ಅಂದಿನ ಸಚಿವ ಸಂಪುಟದ ಒಪ್ಪಿಗೆ ಕೂಡ ಆಗಿತ್ತು. ಆದರೆ ಈ ಜಾಗದಲ್ಲಿ ಪರಿಶಿಷ್ಟ ಜಾತಿ – ಪಂಗಡ ಹಾಗೂ ಹಿಂದುಳಿದ ವರ್ಗದ ಸ್ಮಶಾನ ಜಾಗವು ಒಳಗೊಂಡಿದ್ದು, ತಮ್ಮ ಪೂರ್ವಜರಲ್ಲಿ ಹಲವರನ್ನು ಇಲ್ಲಿ ದಫನ ಮಾಡಲಾಗಿದೆ. ಅಲ್ಲದೆ ಸ್ಮಶಾನಕ್ಕಾಗಿ ಗುರುತಿಸಿದ ಜಾಗವು ಇದರಲ್ಲಿದೆ ಎಂದು ಆರೋಪಿಸಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ನೇತೃತ್ವದಲ್ಲಿ ಸ್ಥಳೀಯರು ಉಪವಾಸ ಸತ್ಯಾಗ್ರಹ ಹೋರಾಟವನ್ನು ನಡೆಸಿತ್ತು. ಬಳಿಕ ವಿವಾದ ಸೃಷ್ಟಿಯಾಗಿ ಹೋರಾಟ ತೀವೃಗೊಂಡ ಪರಿಣಾಮ ಸಂಘರ್ಷ ಹಾಗೂ ಪ್ರಕರಣಗಳು ಕೂಡ ನಡೆದಿದ್ದವು.

ಇದೀಗ ಕೊಡಗು ಜಿಲ್ಲಾಧಿಕಾರಿ ಡಾ. ಬಿ.ಸಿ ಸತೀಶ ಅವರು ವಿವಾದವನ್ನು ಬಗೆಹರಿಸುವ ನಿಟ್ಟಿನಲ್ಲಿ ಹೋರಾಟಗಾರರ ಹಾಗೂ ಕೆ.ಎಸ್.ಸಿ.ಎ ಪ್ರಮುಖರ ಜೊತೆಗೆ ಜಂಟಿಯಾಗಿ ಸಭೆ ನಡೆಸಿ ಚರ್ಚೆ ಮಾಡಿದ ಪರಿಣಾಮ ಪ್ರಕರಣವು ತಾರ್ಕಿಕ ಅಂತ್ಯ ತಲುಪಿದೆ.

- Advertisement -

ಜಿಲ್ಲಾಧಿಕಾರಿ ಡಾ.ಬಿ.ಸಿ ಸತೀಶ, ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾಮಿಶ್ರ, ಕೆ.ಎಸ್.ಸಿ.ಎ ಪದಾಧಿಕಾರಿಗಳು, ಹೊದ್ದೂರು ಗ್ರಾಮ ಪಂಚಾಯತಿ ಪ್ರಮುಖರು ಹಾಗೂ ಹೋರಾಟದ ಪ್ರಮುಖರು ಸೇರಿ  ಕ್ರಿಕೆಟ್ ಸ್ಟೇಡಿಯಂ ಗೆ ಭೂಮಿ ಪೂಜೆ ನಡೆಸಿದರು.

 ಹೋರಾಟಗಾರರ ಬೇಡಿಕೆಗಳನ್ನು ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಕೆ.ಎಸ್.ಸಿ.ಎ ಒಪ್ಪಿಗೊಂಡಿದೆ.

ಈ ಸಂದರ್ಭ ಉಪವಿಭಾಗಾಧಿಕಾರಿ ಈಶ್ವರ್ ಕುಮಾರ್ ಖಂಡು, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಶೇಖರ್, ಡಿ.ಡಿ.ಎಲ್.ಆರ್ ಶ್ರೀನಿವಾಸ್, ತಹಶಿಲ್ದಾರ್ ಮಹೇಶ್,  ಹೋರಾಟ ಸಮಿತಿಯ ಪ್ರಮುಖರಾದ ನಿರ್ವಾಣಪ್ಪ, ಅಮೀನ್ ಮೊಹಿಸಿನ್, ಮೊಣ್ಣಪ್ಪ, ಹಮೀದ್, ಹೊದ್ದೂರು ಗ್ರಾಮ ಪಂಚಾಯತಿ ಅಧ್ಯಕ್ಷೆ ಕುಸುಮಾವತಿ, ಪಿಡಿಓ ಅಬ್ದುಲ್ಲಾ ಮತ್ತಿತರರು ಇದ್ದರು.

ಹೋರಾಟಗಾರರ ಬೇಡಿಕೆಗಳು

1. ಸ್ಮಶಾನಕ್ಕೆ ಎರಡು ಎಕರೆ ಭೂಮಿ. ಒಂದು ಎಕರೆ ಈ ಹಿಂದೆ ಮಂಜೂರು ಮಾಡಿದ ಪ್ರದೇಶದಲ್ಲೇ ನೀಡಬೇಕು ಹಾಗೂ ಮತ್ತೊಂದು ಎಕರೆ ಅದೇ ಸರ್ವೆ ನಂಬರ್ ಪ್ರದೇಶದಲ್ಲಿ ಅತಿಕ್ರಮಣ ತೆರವುಗೊಳಿಸಿ ಸ್ಮಶಾನಕ್ಕಾಗಿ ಕಾಯ್ದಿರಿಸಬೇಕು.

2. ಕ್ರಿಕೆಟ್ ಸಂಸ್ಥೆ ಕಾಮಗಾರಿ ನಿರ್ವಹಿಸುವಾಗ ಕಾನ್ಸಿರಾಮ್ ನಗರದ ಕಾರ್ಮಿಕರಿಗೆ ಹೆಚ್ಚು ಆದ್ಯತೆ ನೀಡಬೇಕು.

3. ಹೋರಾಟ ಸಂದರ್ಭದಲ್ಲಿ ಹೋರಾಟಗಾರರ ಮೇಲೆ ಹಾಕಿದ ಸುಳ್ಳು ಕೇಸುಗಳನ್ನು ತೆಗೆಯಬೇಕು.

4. ಕಾನ್ಸಿರಾಮ್ ನಗರವನ್ನು ಅಭಿವೃದ್ಧಿಗಾಗಿ ಕ್ರಿಕೆಟ್ ಸಂಸ್ಥೆ ದತ್ತು ತೆಗೆದುಕೊಳ್ಳುಬೇಕು.

5. ಕ್ರಿಕೆಟ್ ಸಂಸ್ಥೆಯ ಅಭಿವೃದ್ಧಿ ಸಮಿತಿಯಲ್ಲಿ ಪಂಚಾಯತಿ ಅಧ್ಯಕ್ಷರನ್ನು ಸಮಿತಿ ಸದಸ್ಯರನ್ನಾಗಿ ಮಾಡಬೇಕು.

6. ಕ್ರಿಕೆಟ್ ಸ್ಟೇಡಿಯಂಗೆ ಹೊದ್ದೂರು ಪಾಲೆಮಾಡು ಕಾನ್ಸಿರಾಮ್ ನಗರದ ರಸ್ತೆ ಬಳಕೆ ಮಾಡದೆ ಅತಿಕ್ರಮಿಸಿರುವ ಭೂಮಿ ತೆರವು ಗೊಳಿಸಿ ಹೊಸ ರಸ್ತೆ ನಿರ್ಮಾಣ ಮಾಡಬೇಕು.

ಹಲವು ವರ್ಷಗಳಿಂದ ನಡೆದು ಬಂದ ಬಡವರ ಹೋರಾಟ ಇಂದು ಗೆಲುವು ಖಂಡಿದೆ. ನಮ್ಮ ಈ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ ಎಚ್.ಎಸ್ ದೊರೆಸ್ವಾಮಿ, ಗೌರಿ ಲಂಕೇಶ್, ಎ.ಕೆ.ಸುಬ್ಬಯ್ಯ ಅವರಿಗೆ ಕಾನ್ಸಿರಾಮ್ ನಗರದ ಜನತೆ ನಮನ ಸಲ್ಲಿಸಿರುವುದಾಗಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಅಮೀನ್ ಮೊಹಿಸಿನ್ ತಿಳಿಸಿದರು.

ಅಭಿವೃದ್ಧಿಯ ಜೊತೆಗೆ ಗ್ರಾಮಸ್ಥರ ಬೇಡಿಕೆಗಳನ್ನು ಈಡೇರಿಸಬೇಕಾಗಿದೆ. ಶವಸಂಸ್ಕಾರ ಮಾಡಿರುವ ಜಾಗಕ್ಕೆ ಚ್ಯುತಿ ಬಾರದಾಗೆ ನೋಡಿಕೊಳ್ಳುವುದಾಗಿ ಕೆ.ಎಸ್.ಸಿ.ಎ ಒಪ್ಪಿಗೊಂಡಿದೆ. ಹಾಗೂ ಗ್ರಾಮ ಪಂಚಾಯತಿ ಅಧ್ಯಕ್ಷರು ಹಾಗೂ ಅಧಿಕಾರಿಗಳನ್ನು ಒಳಗೊಂಡ ಸಮಿತಿ ಇದರ ನಿರ್ವಹಣೆ ಮಾಡಲಿದೆ. ಇಲ್ಲಿಯೇ ಒಂದು ಎಕರೆ ಜಾಗ ನೀಡಲಾಗುವುದು ಹಾಗೂ ಬೇರೆ ಕಡೆ ಗುರುತಿಸಿ ಮತ್ತೊಂದು ಎಕರೆ ಜಾಗ ನೀಡಲು ಕ್ರಮ ಕೈಗೊಳ್ಳಲಾಗುವುದೆಂದು ಜಿಲ್ಲಾಧಿಕಾರಿ ಡಾ || ಬಿ.ಸಿ ಸತೀಶ ತಿಳಿಸಿದರು.

Join Whatsapp