ರಷ್ಯಾದೊಂದಿಗಿನ ವಹಿವಾಟು ಸ್ಥಗಿತಗೊಳಿಸಿದ ಅಮೆರಿಕದ ಬಹುರಾಷ್ಟ್ರೀಯ ಕಂಪನಿಗಳು

Prasthutha|

ವಾಷಿಂಗ್ಟನ್: ಅಮೆರಿಕ ರಷ್ಯಾ ತೈಲವನ್ನು ನಿಷೇಧಿಸಿದ ಬೆನ್ನಲ್ಲೇ ಅಮೆರಿಕದ ಕಾರ್ಪೊರೇಟ್ ಶಕ್ತಿಯ ಸಂಕೇತಗಳೆನಿಸಿಕೊಂಡ ಮೆಕ್‌ಡೊನಾಲ್ಡ್, ಸ್ಟಾರ್‌ಬಕ್ಸ್, ಕೊಕೊ ಕೋಲಾ, ಪೆಪ್ಸಿಕೊ ಮತ್ತು ಜನರಲ್ ಇಲೆಕ್ಟ್ರಿಕ್‌ನಂಥ ಜಾಗತಿಕ ಬ್ರಾಂಡ್‌ಗಳು ಕೂಡಾ ತಕ್ಷಣದಿಂದ ರಷ್ಯಾದೊಂದಿಗಿನ ತಮ್ಮವಹಿವಾಟು ಸ್ಥಗಿತಗೊಳಿಸಿರುವುದಾಗಿ ಪ್ರಕಟಿಸಿವೆ.

- Advertisement -

ಉಕ್ರೇನ್ ಮೇಲಿನ ರಷ್ಯಾ ಆಕ್ರಮಣವನ್ನು ಖಂಡಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮೆಕ್‌ಡೊನಾಲ್ಡ್ ಅಧ್ಯಕ್ಷ ಮತ್ತು ಸಿಇಓ ಕ್ರಿಸ್ ಕೆಂಪ್‌ಝಿನ್‌ಸ್ಕಿ ತಿಳಿಸಿದ್ದಾರೆ.

ರಷ್ಯಾದಲ್ಲಿರುವ 850 ಮಳಿಗೆಗಳನ್ನು ಚಿಕಾಗೊ ಮೂಲದ ಈ ದೈತ್ಯ ಬರ್ಗರ್ ಸರಣಿ ತಾತ್ಕಾಲಿಕವಾಗಿ ಮುಚ್ಚಲಿದ್ದು, ರಷ್ಯಾದಲ್ಲಿ ಕೆಲಸ ಮಾಡುತ್ತಿರುವ 62 ಸಾವಿರ ಸಿಬ್ಬಂದಿಗಳಿಗೆ ವೇತನ ಮುಂದುವರಿಸಲಿದೆ ಎಂದು ಅಧ್ಯಕ್ಷರು ಸ್ಪಷ್ಟಪಡಿಸಿದ್ದಾರೆ. ಕಂಪನಿ ಪುನಃ ಯಾವಾಗ ವಹಿವಾಟು ಪುನರಾರಂಭಿಸಲಿದೆ ಎಂಬುವುದನ್ನು ಹೇಳಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

- Advertisement -

130 ರಷ್ಯನ್ ಮಳಿಗೆಗಳಿಂದ ಬರುವ ಲಾಭವನ್ನು ಉಕ್ರೇನ್‌ನ ಮಾನವೀಯ ಪರಿಹಾರಕ್ಕೆ ದೇಣಿಗೆ ನೀಡುವ ಭರವಸೆ ನೀಡಿದ್ದಸ್ಟಾರ್ ಬಕ್ಸ್ ತನ್ನ ನಿರ್ಧಾರವನ್ನು ಬದಲಿಸಿ ರಷ್ಯಾದಲ್ಲಿ ಮಳಿಗೆಗಳನ್ನು ತಾತ್ಕಾಲಿಕವಾಗಿ ಮುಚ್ಚುವುದಾಗಿ ಹೇಳಿದೆ. ಆದರೆ 2000 ರಷ್ಯನ್ ಉದ್ಯೋಗಿಗಳಿಗೆ ವೇತನ ಮುಂದುವರಿಸಲಾಗುವುದು ಎಂದು ಅಧ್ಯಕ್ಷ ಮತ್ತು ಸಿಇಓ ಕೆವಿನ್ ಜಾನ್ಸನ್ ಹೇಳಿದ್ದಾರೆ.

ನ್ಯೂಯಾರ್ಕ್ ಮೂಲದ ಕೊಕೊ ಕೋಲಾ, ಪೆಪ್ಸಿಕೊ ಮತ್ತು ಜನರಲ್ ಇಲೆಕ್ಟ್ರಿಕಲ್ಸ್ ಕೂಡಾ ರಷ್ಯಾದಲ್ಲಿ ತಮ್ಮ ವಹಿವಾಟುಗಳನ್ನು ಸ್ಥಗಿತಗೊಳಿಸಿರುವುದಾಗಿ ಪ್ರಕಟಿಸಿವೆ. 20 ಸಾವಿರ ರಷ್ಯನ್ ಉದ್ಯೋಗಿಗಳು ಮತ್ತು 40 ಸಾವಿರ ರಷ್ಯನ್ ಕೃಷಿ ಕಾರ್ಮಿಕರನ್ನು ರಕ್ಷಿಸುವ ಸಲುವಾಗಿ ಹಾಲು, ಶಿಶು ಉತ್ಪನ್ನಗಳು ಮತ್ತು ಶಿಶು ಆಹಾರದ ವಹಿವಾಟನ್ನು ಮುಂದುವರಿಸುವುದಾಗಿ ಪೆಪ್ಸಿಕೊ ಹೇಳಿದೆ.



Join Whatsapp