ನ್ಯೂಯಾರ್ಕ್: ಅಮೆರಿಕದ ಕೋಟ್ಯಾಧಿಪತಿ ಥಾಮಸ್ ಲೀ ಗುರುವಾರ ತಮ್ಮ ಮ್ಯಾನ್’ಹಟನ್ ಕಚೇರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.
ಅವರಿಗೆ 78 ವರ್ಷ ವಯಸ್ಸಾಗಿತ್ತು.
ಗುರುವಾರ ಬೆಳಿಗ್ಗೆ 11:10ರ ಸುಮಾರಿಗೆ ಉದ್ಯಮಿ ತನ್ನ ಹೂಡಿಕೆ ಸಂಸ್ಥೆಯ ಪ್ರಧಾನ ಕಚೇರಿಯಾದ ಫಿಫ್ತ್ ಅವೆನ್ಯೂ ಮ್ಯಾನ್’ಹಟನ್ ಕಚೇರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡರು ಎಂದು ಪ್ರಕಟಿಸಲಾಗಿದೆ. ಲೀ ಅವರು ತಮ್ಮ ಪಿಸ್ತೂಲ್’ನಿಂದ ತಲೆಗೆ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾರೆ. ಅವರ ಜೀವ ಉಳಿಸುವ ಎಲ್ಲಾ ಪ್ರಯತ್ನಗಳು ವಿಫಲವಾಗಿವೆ ಎಂದು ಪತ್ರಿಕೆ ಹೇಳಿದೆ.
ಥಾಮಸ್ ಲೀ ಅವರ ಕುಟುಂಬ ಸ್ನೇಹಿತ ಮತ್ತು ವಕ್ತಾರ ಮೈಕೆಲ್ ಸಿಟ್ರಿಕ್ ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ್ದು, “ಟಾಮ್ ಅವರ ಸಾವಿನಿಂದ ಕುಟುಂಬವು ತುಂಬಾ ದುಃಖಿತವಾಗಿದೆ. ಖಾಸಗಿ ಈಕ್ವಿಟಿ ವ್ಯವಹಾರದಲ್ಲಿ ಪ್ರವರ್ತಕರಲ್ಲಿ ಒಬ್ಬರು ಮತ್ತು ಯಶಸ್ವಿ ಉದ್ಯಮಿ ಎಂದು ಜಗತ್ತು ಅವರನ್ನು ಗುರುತಿಸಿದ್ದರೂ ಅವರೋರ್ವ ನಿಷ್ಠಾವಂತ ಪತಿ, ತಂದೆ, ಅಜ್ಜ, ಸಹೋದರ, ಸ್ನೇಹಿತ ಮತ್ತು ಪರೋಪಕಾರಿ ಎಂದು ನಾವು ಭಾವಿಸಿದ್ದೇವೆ ಎಂದು ತಿಳಿಸಿದ್ದಾರೆ.