ಅಮೆರಿಕ: ದೇಶಾದ್ಯಂತ ಪ್ಯಾಲೆಸ್ತೀನ್ ಮೇಲೆ ಇಸ್ರೇಲ್ ಅಮಾನವೀಯ ವರ್ತನೆ ವಿರುದ್ಧ ಪ್ರತಿಭಟನೆ ನಡೆಯುತ್ತಿದೆ. ಈ ಮಧ್ತೆ ಪ್ರತಿಭಟನಕಾರೊಂದಿಗೆ ಪೊಲೀಸರು ಕ್ರೂರವಾಗಿ ವರ್ತಿಸುತ್ತಿರುವುದು ವರದಿಯಾಗಿದೆ. ಅಟ್ಲಾಂಟದ ಎಮೊರಿ ವಿವಿಯಲ್ಲಿ ಪ್ಯಾಲೆಸ್ತೀನ್ ಪರ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಸ್ಥಳೀಯ ಪೊಲೀಸರು ಅಮಾನುಷವಾಗಿ ವರ್ತಿಸಿದ್ದು, ಮಹಿಳಾ ಪ್ರಾಧ್ಯಾಪಕರೊಬ್ಬರನ್ನು ಪೊಲೀಸ್ ಒಬ್ಬ ಕೆಳಕ್ಕೆ ಬೀಳಿಸಿ ಮತ್ತಿಬ್ಬರು ಅಧಿಕಾರಿಗಳು ಅವರ ಕೈಯನ್ನು ಹಿಂದಕ್ಕೆ ಕಟ್ಟಿ ಬೇಡಿ ತೊಡಿಸಿದ್ದಾರೆ.
ಹಾರ್ವಾಡ್, ಯಾಲೆ ಸೇರಿದಂತೆ ಅಮೆರಿಕದ ಪ್ರಮುಖ ವಿವಿ ಕ್ಯಾಂಪಸ್‌ಗಳಲ್ಲಿ ಕಳೆದ ಕೆಲವು ದಿನಗಳಿಂದ ಪ್ಯಾಲೆಸ್ತೀನರ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿಯ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿವೆ. ಕಳೆದ ವಾರ ನ್ಯೂಯಾರ್ಕ್‌ನ ಕೊಲಂಬಿಯಾ ವಿವಿಯಲ್ಲಿ ಪ್ರತಿಭಟನೆ ನಡೆಸಿದ 100 ಮಂದಿಯನ್ನು ಬಂಧಿಸಲಾಗಿತ್ತು.ಏ.25 ರಂದು ಜಾರ್ಜಿಯ ಪೊಲೀಸರು ಪ್ರಾಧ್ಯಾಪಕ ಕರೊಲೈನ್ ಫೊಲಿನ್ ಒಳಗೊಂಡಂತೆ 28 ಮಂದಿ ಬಂಧನಕ್ಕೊಳಗಾಗಿದ್ದರು.ಎಮೊರಿ ವಿವಿಯ ತತ್ವಶಾಸ್ತ್ರ ಪ್ರಾಧ್ಯಪಕಿ ನೊಯೊಲ್ಲೆ ಮೆಕ್‌ಕಾಫಿ ಅವರನ್ನು ಕೂಡ ಬಂಧಿಸಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಕಳೆದ ಒಂದು ವಾರದಲ್ಲಿ ಸರಿಸುಮಾರು 550ಕ್ಕೂ ಹೆಚ್ಚು ಮಂದಿಯನ್ನು ಅಮೆರಿಕಾದ ವಿವಿಧ ವಿವಿ ಕ್ಯಾಂಪಸ್‌ಗಳಿಂದ ಬಂಧಿಸಲಾಗಿದೆ ಎಂದು ವರದಿಯಾಗಿದೆ.
ಪ್ರತಿಭಟನಾನಿರತ ಸಂಘಟನೆಗಳು ಪೊಲೀಸರ ಕ್ರೌರ್ಯವನ್ನು ಭಯೋತ್ಪಾದನೆಯ ಕೃತ್ಯ ಎಂದು ಆರೋಪಿಸಿವೆ. ಇಸ್ರೇಲ್ ಪ್ಯಾಲೆಸ್ತೀನ್ ಮೇಲೆ ತೋರಿಸುವ ಕ್ರೌರ್ಯ ನಿಲ್ಲಬೇಕು ಹಾಗೂ ಅಮೆರಿಕದಲ್ಲಿ ಕ್ರೂರವಾಗಿ ವರ್ತಿಸಿ ಬಂಧಿಸಲಾಗಿರುವ ಎಲ್ಲ ಚಳುವಳಿಗಾರರನ್ನು ಪೊಲೀಸರು ತಕ್ಷಣ ಬಿಡುಗಡೆ ಮಾಡುವಂತೆ ಆಗ್ರಹಿಸಿ ಅಮೆರಿಕದಲ್ಲಿ ಪ್ರತಿಭಟನೆಗಳು ನಡೆಯುತ್ತಿದೆ.