ತನ್ನ ಅಣ್ವಸ್ತ್ರ ಸಜ್ಜಿತ ರಾಷ್ಟ್ರದ ಅತ್ಯಂತ ದೊಡ್ಡ ಶತ್ರು ಅಮೆರಿಕಾವಾಗಿದೆ ಎಂದು ಉತ್ತರ ಕೊರಿಯಾ ನಾಯಕ ಕಿಮ್ ಜಾಂಗ್ ಉನ್ ಹೇಳಿದ್ದಾರೆ. ತನ್ನ ಪರಮಾಣು ಶಸ್ತ್ರಗಾರವನ್ನು ತೀವ್ರವಾಗಿ ವಿಸ್ತರಿಸುವುದಾಗಿ ಅವರು ಬೆದರಿಕೆಯೊಡ್ಡಿದ್ದಾರೆ.
ಕಿಮ್ ಓರ್ವ ‘ಕೊಲೆಗಡುಕ’ನೆಂದು ಕರೆದ ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರೊಂದಿಗೆ ಅವರ ಶೃಂಗ ಸಭೆಗಳನ್ನು ಟೀಕಿಸಿದ ಹೊಸದಾಗಿ ಆಯ್ಕೆಯಾಗಿರುವ ಅಧ್ಯಕ್ಷ ಜೋ ಬೈಡನ್ ಮೇಲೆ ಒತ್ತಡ ಹೇರುವುದಕ್ಕಾಗಿ ಈ ವಾರದ ಆಡಳಿತ ಪಕ್ಷದ ಪ್ರಮುಖ ಸಭೆಯ ವೇಳೆ ಕಿಮ್ ಈ ಹೇಳಿಕೆಯನ್ನಿತ್ತಿದ್ದಾರೆ.
“ನಮ್ಮ ಅತ್ಯಂತ ದೊಡ್ಡ ಶತ್ರು ಮತ್ತು ನಮ್ಮ ನವೀನ ಅಭಿವೃದ್ಧಿಗೆ ಪ್ರಮುಖ ತಡೆಯಾಗಿರುವ ಅಮೆರಿಕಾವನ್ನು ನಿಗ್ರಹಿಸುವತ್ತ ನಮ್ಮ ವಿದೇಶಿ ರಾಜಕಾರಣ ಚಟುವಟಿಕೆಗಳು ಗಮನಹರಿಸಲಿದೆ ಮತ್ತು ಮರುನಿರ್ದೇಶಿತಗೊಳ್ಳಲಿದೆ” ಎಂದು ಶನಿವಾರದಂದು ಕಿಮ್ ಹೇಳಿರುವುದಾಗಿ ಕೊರಿಯನ್ ಸೆಂಟ್ರಲ್ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.
“ಅಮೆರಿಕಾದಲ್ಲಿ ಯಾರು ಅಧಿಕಾರದಲ್ಲಿರುತ್ತಾರೆ ಎನ್ನುವುದು ವಿಷಯವಲ್ಲ. ಉತ್ತರ ಕೊರಿಯಾದ ಕುರಿತ ಅಮೆರಿಕಾ ಮತ್ತು ಅದರ ಮೂಲಭೂತ ನೀತಿಗಳ ನಿಜವಾದ ಸ್ವಭಾವ ಬದಲಾಗಲಾರದು: ಎಂದು ಕಿಮ್ ಹೇಳಿದ್ದಾರೆ. ತಾನು ಸಾಮ್ರಾಜ್ಯಶಾಹಿ ವಿರೋಧಿ ಸ್ವತಂತ್ರ ಪಡೆಗಳೊಂದಿಗೆ ಸಂಬಂಧವನ್ನು ವೃದ್ಧಿಸುವುದಾಗಿ ಅವರು ಹೇಳಿದ್ದಾರೆ. ಅಣು ಸಾಮರ್ಥ್ಯವನ್ನು ವೃದ್ಧಿಸುವಂತೆ ಅವರು ಕರೆಯಿತ್ತಿದ್ದಾರೆ.