ಜೈಪುರ: ಸರ್ಕಾರಿ ಆಂಬ್ಯುಲೆನ್ಸ್’ನಲ್ಲಿ ಇಂಧನ ಖಾಲಿಯಾದ ಪರಿಣಾಮ ರೋಗಿಯೊಬ್ಬರು ಮಾರ್ಗಮಧ್ಯೆಯೇ ಮೃತಪಟ್ಟಿರುವ ದಾರುಣ ಘಟನೆ ರಾಜಸ್ಥಾನದ ಬನ್’ಸ್ವಾರದಲ್ಲಿ ನಡೆದಿದೆ.
ಬನ್’ಸ್ವಾರ ಜಿಲ್ಲೆಯ ದಾನಾಪುರ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಘಟನೆಯ ಬಗ್ಗೆ ಆರೋಗ್ಯ ಇಲಾಖೆ ತನಿಖೆ ನಡೆಸುವುದಾಗಿ ಹೇಳಿದೆ.
40 ವರ್ಷದ ತೇಜಿಯಾ ಎಂಬ ಮಹಿಳೆ ಇದ್ದಕ್ಕಿದ್ದಂತೆ ಮೂರ್ಛೆ ಹೋಗಿದ್ದಕ್ಕೆ ಆಕೆಯನ್ನು ಜಿಲ್ಲಾ ಆಸ್ಪತ್ರೆಗೆ ಆಂಬ್ಯುಲೆನ್ಸ್’ನಲ್ಲಿ ಕರೆದೊಯ್ದಿದ್ದರು. ಆದರೆ ಆಂಬ್ಯುಲೆನ್ಸ್ ಇಂಧನದ ಕೊರತೆಯಿಂದಾಗಿ ಇದ್ದಕ್ಕಿದ್ದಂತೆ ಬನ್ ಸ್ವಾರದಿಂದ 10-12 ಕಿ.ಮೀ ದೂರದಲ್ಲಿರುವ ರತ್ಲಾಮ್ ರಸ್ತೆಯ ಟೋಲ್ ಪ್ಲಾಜಾದಲ್ಲಿ ನಿಂತಿದೆ. ಸುಮಾರು ಒಂದು ಕಿಲೋಮೀಟರ್ ವರೆಗೆ ತಳ್ಳಿ, ಡೀಸೆಲ್ ಹಾಕಿದರೂ ಗಾಡಿ ಮುಂದೆ ಹೋಗದಿದ್ದರಿಂದ ಮತ್ತೊಂದು ಆಂಬ್ಯುಲೆನ್ಸ್ ಅನ್ನು ಕರೆಸಿಕೊಳ್ಳಬೇಕಾಯಿತು ಎನ್ನಲಾಗಿದೆ.
ರೋಗಿಯು ಆಸ್ಪತ್ರೆಯನ್ನು ತಲುಪಿದಾಗ, ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.
ನಾವು ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಈ ಬಗ್ಗೆ ಯಾರೂ ದೂರು ಕೊಟ್ಟಿಲ್ಲ. ಆಂಬ್ಯುಲೆನ್ಸ್ ನಲ್ಲಿ ಡೀಸೆಲ್ ಖಾಲಿಯಾಗಿದೆ ಎಂದು ನಮಗೆ ತಿಳಿಸಲಾಗಿದೆ. ಈ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಕಂಡುಬಂದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಬನ್ ಸ್ವಾರ ಮುಖ್ಯ ವೈದ್ಯಕೀಯ ಆರೋಗ್ಯ ಅಧಿಕಾರಿ ಡಾ.ಎಚ್.ಎಲ್.ತಬಿಯಾರ್ ತಿಳಿಸಿದ್ದಾರೆ.