ಪ್ರತಿಷ್ಠೆ, ನಾಯಕತ್ವದ ಹಂಬಲವಿಲ್ಲದೆ ಸಮುದಾಯದ ಏಳಿಗೆಗಾಗಿ ಕೆಲಸಗಳಾಗಲಿ : ನಟ ಮೋಹನ್ ಶೇಣಿ

Prasthutha|

ಮೂಡುಬಿದಿರೆ : ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನಮಗೆ ಹೋರಾಟದ ಮನೋಭಾವಕ್ಕೆ ಮಾರ್ಗದರ್ಶನ ನೀಡಿ ಹೋಗಿದ್ದಾರೆ. ಸಮುದಾಯದಲ್ಲಿ ಹಲವು ಪ್ರತಿಭೆಗಳಿವೆ. ತುಂಬಾ ಜನ ಕೆಲಸ ಮಾಡುವವರಿದ್ದಾರೆ. ಆದರೆ, ಆರ್ಥಿಕವಾಗಿ ಸಶಕ್ತವಾಗಿ ಪರಿವರ್ತನೆಯಾಗಲು ನಮ್ಮಿಂದ ಸಾಧ್ಯವಾಗುತ್ತಿಲ್ಲ. ಆದುದರಿಂದ ಪ್ರತಿಷ್ಠೆ, ನಾಯಕತ್ವದ ಹಂಬಲಕ್ಕಾಗಿ ನಾವು ಕೆಲಸ ಮಾಡದೆ ಸಮುದಾಯದ ಅಬಿವೃದ್ಧಿಗಾಗಿ ಯುವಸೇನೆಯ ಮೂಲಕ ಕೆಲಸ ಮಾಡಬೇಕಾಗಿದೆ ಎಂದು ರಾಷ್ಟ್ರಪ್ರಶಸ್ತಿ ಪುರಸ್ಕೃತ ಚಲನಚಿತ್ರ ನಟ ಮೋಹನ್ ಶೇಣಿ ಹೇಳಿದ್ದಾರೆ.

- Advertisement -

ಮೂಡುಬಿದಿರೆಯಲ್ಲಿ ನಡೆದ ಡಾ. ಬಿ.ಆರ್. ಅಂಬೇಡ್ಕರ್ ಅವರ ಪರಿನಿಬ್ಬಾಣ ದಿನ ಹಾಗೂ ಶ್ರೀ ಸತ್ಯಸಾರಮಾನಿ ಯುವಸೇನೆ ಇದರ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮೂಡುಬಿದಿರೆ ಸ್ವರ್ಣ ಮಂದಿರದಲ್ಲಿ ಸರಳವಾಗಿ ಈ ಕಾರ್ಯಕ್ರಮ ನಡೆಯಿತು.

ಸಮುದಾಯದ ಯುವಜನರು ಆರ್ಥಿಕವಾಗಿ ಮುನ್ನೆಲೆಗೆ ಬರಲು, ಭವಿಷ್ಯದ ಜನಾಂಗದ ಒಳಿತಿಗಾಗಿ ಸ್ವಂತ ಉದ್ಯೋಗ, ಉದ್ದಿಮೆಗಳಲ್ಲಿ ತೊಡಗಬೇಕು ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಸತ್ಯಸಾರಮಾನಿ ಯುವಸೇನೆಯ ಅಧ್ಯಕ್ಷ ಸುರೇಶ್ ಪಿ.ಬಿ. ಕರೆ ನೀಡಿದರು. ಯುವ ಸಮುದಾಯದ ಆರ್ಥಿಕ ಸಶಕ್ತತೆಗೆ ಸಂಘಟನೆಯು ಕೆಲವು ಯೋಜನೆಗಳನ್ನು ರೂಪಿಸಿದ್ದು, ಶಿಸ್ತು ಮತ್ತು ಬದ್ಧತೆಯಿಂದ ಅದನ್ನು ಜಾರಿಗೊಳಿಸಲಾಗುತ್ತದೆ. ಇದಕ್ಕಾಗಿ ಎಲ್ಲರೂ ಕೈಜೋಡಿಸುವಂತೆ ಅವರು ಮನವಿ ಮಾಡಿದರು.

- Advertisement -

ಪುತ್ತೂರಿನ ಪತ್ರಕರ್ತೆ ಯೋಗಿನಿ ಮಚ್ಚಿನ ‘ಕುಲದೈವ ಕಾನದ-ಕಟದರು ಮತ್ತು ಅವರ ಆದರ್ಶಗಳು’ ಎಂಬ ವಿಷಯದ ಕುರಿತು ಮಾತನಾಡಿದರು. ಬಂಟ್ವಾಳದ ಆಲದಪದವು ಅಕ್ಷರಭಾರತಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ನ ಶಿಕ್ಷಕ ಸುಕೇಶ್, ಬಾಬಾ ಸಾಹೇಬ್ ಅಂಬೇಡ್ಕರ್ ಜೀವನ ಮತ್ತು ಅವರ ಸಂದೇಶಗಳು’ ಎಂಬ ವಿಚಾರದಲ್ಲಿ ವಿಚಾರ ಮಂಡಿಸಿದರು.

ಮಂಗಳೂರಿನ ರಂಗನಟ, ‘ಶಿವದೂತೆ ಗುಳಿಗೆ’ ಖ್ಯಾತಿಯ ನಟ, ಹಿನ್ನೆಲೆ ಗಾಯಕ ವಿನೋದ್ ರಾಜ್ ಕೋಕಿಲ, ಬೆಳ್ತಂಗಡಿಯ ಯುವ ಉದ್ಯಮಿ, ಯುವ ಸಂಕಿರಣದ ಅಧ್ಯಕ್ಷ ಲಕ್ಷ್ಮಣ್ ಜಿ.ಎಸ್., ಮೂಡುಬಿದಿರೆಯ ನ್ಯಾಯವಾದಿ ಪ್ರಮೀಳಾ, ಶ್ರೀ ಸತ್ಯಸಾರಮಾನಿ ಸೇನೆಯ ಪ್ರಧಾನ ಕಾರ್ಯದರ್ಶಿ ಉದಯ ಗೋಳಿಯಂಗಡಿ, ಖಜಾಂಚಿ ರಾಜೇಶ್ ನೆತ್ತೋಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಶ್ರೀ ಸತ್ಯಸಾರಮಾನಿ ಯುವಸೇನೆಯ ಉಪಾಧ್ಯಕ್ಷ ಶೇಖರ್ ವಿ.ಜಿ. ವೇಣೂರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಾಂಸ್ಕೃತಿಕ ಸಹ ಕಾರ್ಯದರ್ಶಿ ಸ್ವಾಗತಿಸಿದರು. ಸದಸ್ಯೆ ಸ್ವಾತಿ ನೇರಳಕಟ್ಟೆ ಕಾರ್ಯಕ್ರಮ ನಿರೂಪಿಸಿದರು. ಸುಮಾ ಸಿದ್ದಕಟ್ಟೆ ವಂದಿಸಿದರು.  

Join Whatsapp