ನವದೆಹಲಿ: ಪಂಜಾಬ್ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಬಿಜೆಪಿ ಸೇರುವ ಊಹಾಪೋಹಗಳಿಗೆ ತೆರೆ ಎಳೆದಿದ್ದು, ನಾನು ಬಿಜೆಪಿ ಸೇರುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಕಾಂಗ್ರೆಸ್ ನಲ್ಲಿ ಇಷ್ಟು ಕಾಲ ಅನುಭವಿಸಿದ ಅವಮಾನದಿಂದಾಗಿ ಪಕ್ಷ ತೊರೆಯುವುದಾಗಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಸೆಪ್ಟೆಂಬರ್ 18 ರಂದು ಪಂಜಾಬ್ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ್ದ ನಂತರ ಬಿಜೆಪಿ ಸೇರುತ್ತಿರುವುದಾಗಿ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಯ ನಡುವೆ ನಿನ್ನೆ ಅವರು ಕೇಂದ್ರ ಗೃಹ ಸಚಿವರನ್ನು ಅವರ ನಿವಾಸದಲ್ಲಿ ಭೇಟಿ ನೀಡಿ ಗಮನ ಸೆಳೆದಿದ್ದರು. ಸದ್ಯ ಅಮರೀಂದರ್ ಸಿಂಗ್ ಈ ಊಹಾಪೋಹಕ್ಕೆ ತೆರೆ ಎಳೆದಿದ್ದಾರೆ.
ಇಲ್ಲಿಯ ವರೆಗೆ ಕಾಂಗ್ರೆಸ್ ನಲ್ಲಿ ನಿಸ್ವಾರ್ಥವಾಗಿ ಕಾರ್ಯ ನಿರ್ವಹಿಸಿದ್ದೇನೆ. ಕಾಂಗ್ರೆಸ್ ತಮ್ಮನ್ನು ನಡೆಸಿಕೊಂಡ ಅವಮಾನದಿಂದಾಗಿ ಪಕ್ಷ ತೊರೆಯುತ್ತಿರುವುದಾಗಿ ತಿಳಿಸಿದರು.
ಈ ಮಧ್ಯೆ ಮಹತ್ವದ ರಾಜಕೀಯ ಬಿಕ್ಕಟ್ಟನ್ನು ಶಮನಗೊಳಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ನ ಹಿರಿಯ ನಾಯಕರಾದ ಅಂಬಿಕಾ ಸೋನಿ ಮತ್ತು ಕಮಲ್ ನಾಥ್ ಅವರು ಅಮರೀಂದರ್ ಸಿಂಗ್ ಅವರನ್ನು ಮನವೊಲಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪ್ರಸಕ್ತ ದೆಹಲಿ ಭೇಟಿಯಲ್ಲಿರುವ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಲು ನಿರಾಕರಿಸಿದ್ದಾರೆ.
ಇಂದು ಬೆಳಗ್ಗೆ ಮಾಜಿ ಮುಖ್ಯಮಂತ್ರಿ ಅಮರೀಂದರ್ ಅವರು ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರನ್ನು ಭೇಟಿ ಮಾಡಿ ಪಂಜಾಬ್ ನ ಸುರಕ್ಷತೆಯನ್ನು ಖಾತ್ರಿ ಪಡಿಸುವ ನಿಟ್ಟಿನಲ್ಲಿ ಸುದೀರ್ಘ ಚರ್ಚೆ ನಡೆಸಿದರು ಎಂದು ಮೂಲಗಳು ತಿಳಿಸಿವೆ.