ನವದೆಹಲಿ: ಪಾಲಿಕೆ ಅಧಿಕಾರಿಗಳ ಕಟ್ಟಡ ತೆರವು ಕಾರ್ಯಾಚರಣೆಯ ವಿರುದ್ಧ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಬಂಧಿತರಾಗಿದ್ದ ಶಾಸಕ ಅಮಾನತುಲ್ಲಾ ಖಾನ್ ಆವರಿಗೆ ದೆಹಲಿಯ ಸಾಕೇತ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
SDMC ಅತಿಕ್ರಮಣದ ನೆಪದಲ್ಲಿ ಕಟ್ಟಡ ತೆರವು ಕಾರ್ಯಾಚರಣೆಯ ವಿರುದ್ಧ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಅಮಾನತುಲ್ಲಾ ಅವರನ್ನು ನಿನ್ನೆ ಮದನ್ ಪುರ ಖಾದರ್ ನಲ್ಲಿ ದೆಹಲಿ ಪೊಲೀಸರು ಬಂಧಿಸಿದ್ದರು.
ಇದರ ವಿರುದ್ಧ ಪ್ರತಿಕ್ರಿಯಿಸಿದ ಅವರ ಪತ್ನಿ ಶಫಿಯಾ, ನನ್ನ ಪತಿಯ ಜೀವಕ್ಕೆ ಅಪಾಯವಿದೆ ಎಂದು ಟ್ವೀಟ್ ಮೂಲಕ ತಿಳಿಸಿದ್ದರು. ಜನರ ಪರವಾಗಿ ಧ್ವನಿ ಎತ್ತಿದ್ದಕ್ಕಾಗಿ ತನ್ನ ಪತಿ ಅಮಾನತುಲ್ಲಾ ಖಾನ್ ಅವರನ್ನು ಬಂಧಿಸಿ, ಜೈಲಿಗಟ್ಟಲಾಗಿತ್ತು ಎಂದು ಶಫಿಯಾ ಆರೋಪಿಸಿದ್ದಾರೆ. ಈ ನಿಟ್ಟಿನಲ್ಲಿ ಒಖ್ಲಾದ ಅಂಗಡಿ ಮಾಲಕರು ತಮ್ಮ ಅಂಗಡಿಗಳನ್ನು ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ ಬಂದ್ ಮಾಡಿ ಅವರಿಗೆ ಬೆಂಬಲ ಸೂಚಿಸುವಂತೆಯೂ ಮನವಿ ಮಾಡಿದ್ದಾರೆ.