ವಿದ್ಯಾರ್ಥಿನಿಯರು ದುಪ್ಪಟ್ಟ ಧರಿಸಿ ತರಗತಿಗೆ ಹಾಜರಾಗಲು ಅವಕಾಶ ಕಲ್ಪಿಸಿ: ಸಿದ್ದರಾಮಯ್ಯ ಒತ್ತಾಯ

Prasthutha|

ಬೆಂಗಳೂರು: ಹಿಜಾಬ್ ವಿಷಯ ಸುಪ್ರೀಂಕೋರ್ಟ್ ನಲ್ಲಿ ಇರುವುದರಿಂದ ಅದರ ಬಗ್ಗೆ ಮಾತನಾಡುವುದಿಲ್ಲ. ಆದರೆ ಮುಸ್ಲಿಮ್ ವಿದ್ಯಾರ್ಥಿನಿಯರು ಶಿಕ್ಷಣದಿಂದ ವಂಚಿತರಾಗದಂತೆ ಮಾಡಲು ಅವರಿಗೆ ದುಪ್ಪಟ್ಟ ಧರಿಸಲು ಅವಕಾಶ ನೀಡಬೇಕು. ಈ ಬಗ್ಗೆ ಸರ್ಕಾರ ಆದಷ್ಟು ಶೀಘ್ರ ನಿರ್ಧಾರ ಕೈಗೊಳ್ಳಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

- Advertisement -


ವಿಧಾನಸಭೆಯ ಕಲಾಪದಲ್ಲಿ ಮಾತನಾಡಿದ ಅವರು, ‘ನಾನು ಹಿಜಾಬ್ ಬಗ್ಗೆ ಪ್ರಸ್ತಾಪಿಸುವುದಕ್ಕೆ ಹೋಗುವುದಿಲ್ಲ. ಏಕೆಂದರೆ ಅದೀಗ ಸುಪ್ರೀಂಕೋರ್ಟ್ ನಲ್ಲಿ ವಿಚಾರಣಾ ಹಂತದಲ್ಲಿದೆ. ಆದರೆ ನಿನ್ನೆ ಕೆಲವು ಮುಸ್ಲಿಂ ಧರ್ಮ ಗುರುಗಳು ನಮ್ಮನ್ನು ಭೇಟಿ ಮಾಡಿ ಈ ಮನವಿ ಸಲ್ಲಿಸಿದ್ದಾರೆ. ಅವರು ಶಾಲೆ- ಕಾಲೇಜಿನಲ್ಲಿ ಸಮವಸ್ತ್ರವನ್ನೇ ಧರಿಸುತ್ತಾರೆ. ಆದರೆ ಅದೇ ಬಣ್ಣದ ದುಪ್ಪಟವನ್ನು ಬಳಸುವುದಕ್ಕೆ ಅವಕಾಶ ಕೋರಿದ್ದಾರೆ. ಅದು ಬುರ್ಖಾ ಅಥವಾ ಹಿಜಾಬ್ ಅಲ್ಲ. ಸರ್ಕಾರ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕು. ಇದು ಹೆಣ್ಣು ಮಕ್ಕಳ ಶಿಕ್ಷಣದ ಹಕ್ಕಿನ ಪ್ರಶ್ನೆ ಎಂದು ಹೇಳಿದರು.


ಇದಕ್ಕೆ ಪ್ರತಿಕ್ರಿಯೆ ನೀಡಿದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಶಿಕ್ಷಣದಿಂದ ವಂಚಿತರಾಗದಂತೆ ನಾವು ಸಾಕಷ್ಟು ಸಲಹೆ ನೀಡಿದರೂ ಉಡುಪಿಯ ಆ ಆರು ಮಂದಿ ವಿದ್ಯಾರ್ಥಿನಿಯರು ನಮ್ಮಮಾತು ಕೇಳಿಲ್ಲ. ನೀವೇ ಸ್ವಲ್ಪ ಅವರ ಮನವೊಲಿಸಿ ಎಂದು ಹೇಳಿದರು.




Join Whatsapp