ಸರ್ಕಾರಿ ಭೂಮಿಯನ್ನು ಅಕ್ರಮ ಡಿನೋಟಿಫಿಕೇಷನ್‌ ಮಾಡಿದ ಆರೋಪ; ಸಿದ್ದರಾಮಯ್ಯ ವಿರುದ್ಧ ದೂರು ದಾಖಲು

Prasthutha|

ಬೆಂಗಳೂರು: ಸರ್ಕಾರಿ ಭೂಮಿಯನ್ನು ಡಿನೋಟಿಫಿಕೇಷನ್ ಮಾಡಿದ ಆರೋಪದ ಮೇಲೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಶ್ಯಾಮ್ ಭಟ್ ವಿರುದ್ಧ ಬಿಜೆಪಿ ದಕ್ಷಿಣ ಬೆಂಗಳೂರು ಘಟಕದ ಮುಖಂಡ ಎನ್.ಆರ್.ರಮೇಶ್ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.

- Advertisement -


ಖಾಸಗಿ ಬಿಲ್ಡರ್ ಅಶೋಕ್ ಧಾರಿವಾಲ್ ಎಂಬವರಿಗೆ ಕಾನೂನುಬಾಹಿರವಾಗಿ ಭೂಮಿಯನ್ನು ಡಿ-ನೊಟಿಫೈ ಮಾಡಿಕೊಡಲಾಗಿದೆ. ಬೆಂಗಳೂರು ದಕ್ಷಿಣ ತಾಲೂಕು ಕಸಬಾ ಹೋಬಳಿಯ ಸಿದ್ದಾಪುರದ ಉದ್ಯಾನವನ ಮತ್ತು ಸಾರ್ವಜನಿಕ ಬಳಕೆಗೆ ಮೀಸಲಾಗಿದ್ದ ಭೂಮಿಯನ್ನು ಅವರು ಖರೀದಿಸಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.


ಈ ಭೂಮಿಯ ಮೌಲ್ಯವು ₹ 200 ಕೋಟಿ ಎಂದು ಅಂದಾಜಿಸಲಾಗಿದ್ದು, ಸರ್ವೆ ನಂಬರ್ 27/1, 28/4, 28/5 ಮತ್ತು 28/6 ರಲ್ಲಿರುವ ಸುಮಾರು 2.39 ಎಕರೆ ಭೂಮಿಯನ್ನು ಡಿ-ನೋಟಿಫೈ ಮಾಡಲಾಗಿದೆ. ನಿಯಮಗಳ ಪ್ರಕಾರ ಈ ಮೀಸಲು ಪ್ರದೇಶದಲ್ಲಿ ಯಾವುದೇ ನಿರ್ಮಾಣ ಕಾರ್ಯಗಳು ನಡೆಯುವುದು ಕಾನೂನು ಬಾಹಿರ ಚಟುವಟಿಕೆ ಎನಿಸಿಕೊಳ್ಳುತ್ತದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

- Advertisement -

ನರ್ಸರಿಗಳಿದ್ದ ಈ ಸ್ವತ್ತನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಮಾಸ್ಟರ್ ಪ್ಲಾನ್ ಪ್ರಕಾರ ಉದ್ಯಾನವನ ಮತ್ತು ಸಾರ್ವಜನಿಕ ಬಳಕೆಯ ಜಾಗ ಎಂದು ಮೀಸಲಿಟ್ಟಿತ್ತು. ಪ್ರಭಾವಿ ಖಾಸಗಿ ಬಿಲ್ಡರ್ ಅಶೋಕ್ ಧಾರಿವಾಲ್ ಎಂಬವರ ಹಣದ ಪ್ರಭಾವಕ್ಕೆ ಒಳಗಾಗಿ ಕಾನೂನುಬಾಹಿರವಾಗಿ ಸರ್ಕಾರಿ ಸ್ವತ್ತನ್ನು ರಿ-ಡೂ ಎಂಬ ಹೆಸರಿನಲ್ಲಿ ಡಿ ನೋಟಿಫಕೇಷನ್ ಮಾಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಪೇಸಿಎಂ ಪೋಸ್ಟರ್ ಅಭಿಯಾನ ಆರಂಭಿಸಿದ್ದ ಕಾಂಗ್ರೆಸ್ ಪಕ್ಷದ ಬಗ್ಗೆ ಬಿಜೆಪಿಯಲ್ಲಿ ಆಕ್ರೋಶ ಮೂಡಿತ್ತು. ಪಿಎಸ್ಐ ನೇಮಕಾತಿ ಹಗರಣ, ಕೆಪಿಎಸ್ಸಿ ಹಗರಣಗಳನ್ನು ಪದೇಪದೇ ಪ್ರಸ್ತಾಪಿಸುವ ಮೂಲಕ ಕಾಂಗ್ರೆಸ್ ಪಕ್ಷವು ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡುವ ಮೂಲಕ ಬಿಜೆಪಿ ತನ್ನ ಸೇಡು ತೀರಿಸಿಕೊಂಡಿದೆ.



Join Whatsapp