ಅಲಹಾಬಾದ್: ಪ್ರವಾದಿ ನಿಂದನೆಗೆ ಸಂಬಂಧಿಸಿದಂತೆ ತಪ್ಪಿತಸ್ಥ ನೂಪುರ್ ಶರ್ಮಾ ಮತ್ತು ನವೀನ್ ಅವರನ್ನು ಬಂಧಿಸುವಂತೆ ಆಗ್ರಹಿಸಿ ಜೂನ್ 10 ರಂದು ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಕ್ಕಾಗಿ AIMIM ಜಿಲ್ಲಾಧ್ಯಕ್ಷ ಸೇರಿದಂತೆ ಇತರೆ ನಾಲ್ವರು ಕಾರ್ಯಕರ್ತರ ವಿರುದ್ಧ ಅಲಹಾಬಾದ್ ಪೊಲೀಸರು ಜಾಮೀನು ರಹಿತ ವಾರಂಟ್ ಜಾರಿಗೊಳಿಸಿದಾರೆ.
ಅವರು ಆರೋಪಿಗಳನ್ನು ಬಂಧಿಸುವಲ್ಲಿ ವಿಫಲರಾದ ಹಿನ್ನೆಲೆಯಲ್ಲಿ ನ್ಯಾಯಾಲಯದ ಮೊರೆ ಹೋಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ AIMIM ಅಲಹಾಬಾದ್ ಜಿಲ್ಲಾಧ್ಯಕ್ಷ ಶಾ ಆಲಂ, ಕಾರ್ಯಕರ್ತರಾದ ಫಝಲ್, ಉಮರ್ ಖಾಲಿದ್, ಆಶಿಶ್ ಮಿತ್ತಲ್ ಮತ್ತು ಜೀಶನ್ ರೆಹ್ಮಾನ್ ಎಂಬವರ ವಿರುದ್ಧ ವಾರಂಟ್ ಜಾರಿಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪೈಕಿ ಫಝಲ್ ಸ್ಥಳೀಯ ಕಾರ್ಪೋರೇಟರ್ ಆಗಿದ್ದು, ಉಮರ್ ಮತ್ತು ಜೀಶನ್ ಸ್ಥಳೀಯ ಕಾರ್ಯಕರ್ತರು ಎಂದು ತಿಳಿದು ಬಂದಿದೆ. ಈ ಎಲ್ಲರೂ ಹಿಂದೆ ಅಲಹಾಬಾದ್’ನಲ್ಲಿ ಸಿಎಎ/ ಎನ್.ಆರ್.ಸಿ ವಿರುದ್ಧದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಆಶಿಶ್ ಮಿತ್ತಲ್ ಜೂನ್ 10 ರಂದು ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದು, AIMIM ಪಕ್ಷದೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾರೆ. ತನಿಖೆಯ ವೇಳೆ ಈ ಐವರ ಪಾತ್ರ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.