ಮಂಗಳೂರು : ಕಾಂಗ್ರೆಸ್ ಸರ್ಕಾರ ಮತ್ತೊಂದು ಜನಪರ ಬಜೆಟ್ ಮಂಡನೆ ಮಾಡಿದ್ದು ಸಿಎಂ ಸಿದ್ದರಾಮಯ್ಯ ಅವರ ದಾಖಲೆಯ 15ನೇ ಬಜೆಟ್ ಗ್ಯಾರಂಟಿ ಯೋಜನೆಗಳ ಜೊತೆಗೆ ರಾಜ್ಯದ ಸಮಗ್ರ ಅಭಿವೃದ್ಧಿ ಮತ್ತು ಎಲ್ಲಾ ವರ್ಗದ ಜನರಿಗೆ ಪಾಲು ನೀಡಲಾಗಿದೆ. ಇದು ಸರ್ವರಿಗೂ ಸಮಬಾಳು ಧ್ಯೇಯದಿಂದ ಕೂಡಿರುವ ಸರ್ವರ ಅಭಿವೃದ್ಧಿಯ ಗ್ಯಾರಂಟಿ ಬಜೆಟ್ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟನೆ ನೀಡಿರುವ ಅವರು, ಕರಾವಳಿ ಕರ್ನಾಟಕ ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ಬಜೆಟ್ ನಲ್ಲಿ ಹೆಚ್ಚಿನ ಪ್ರಾಶಸ್ತ್ಯ ಸಿಕ್ಕಿರುವುದು ಖುಷಿಯ ವಿಚಾರ. ಮೀನುಗಾರಿಕೆ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ 3,000 ಕೋಟಿ ರೂ. ಬೃಹತ್ ಮೊತ್ತದ ಯೋಜನೆ, 10 ಸಾವಿರ ವಸತಿರಹಿತ ಮೀನುಗಾರರಿಗೆ ಮನೆ ನಿರ್ಮಾಣಕ್ಕೆ ಸಹಾಯಧನ, ಮತ್ಸ್ಯ ಆಶಾಕಿರಣ ಯೋಜನೆಯಡಿ ಮೀನುಗಾರರ ಪರಿಹಾರ ಮೊತ್ತ ಹೆಚ್ಚಳ, ಸಮುದ್ರ ಆಂಬುಲೆನ್ಸ್ ಯೋಜನೆ, ಒಳನಾಡು ಸಾರಿಗೆ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಿದ್ದು, ಮಂಗಳೂರು ನಗರದಲ್ಲಿ ಅತ್ಯಾಧುನಿಕ ಕೃಷಿ ಸಂಕೀರ್ಣ ಸ್ಥಾಪನೆ, ಮಂಗಳೂರು ಬಂದರ್ ನಿಂದ ಬೆಂಗಳೂರು ವರೆಗೆ ಆರ್ಥಿಕ ಅಭಿವೃದ್ಧಿ ಕಾರಿಡಾರ್ ನಿರ್ಮಾಣ, ಮಂಗಳೂರು ನಗರದ ಸಮೀಪ ಇಂಟಿಗ್ರೇಟೆಡ್ ಟೌನ್ ಶಿಪ್ ಅಭಿವೃದ್ಧಿ, ಮಂಗಳೂರಿನಲ್ಲಿ ಹಜ್ ಭವನದ ನಿರ್ಮಾಣಕ್ಕೆ ಅನುದಾನ, ಪುತ್ತೂರಿನಲ್ಲಿ ಪಶು ವೈದ್ಯಕೀಯ ಕಾಲೇಜು, ಅಡಕೆ ರೋಗ ನಿಯಂತ್ರಣಕ್ಕೆ ಸಂಶೋಧನೆ, ನೇತ್ರಾವತಿ ನದಿಗಳಲ್ಲಿ ಜಲಮೆಟ್ರೋ ಸೇವೆಗಳನ್ನು ಪರಿಚಯಿಸಲು ಕಾರ್ಯಸಾಧ್ಯತಾ ವರದಿಯನ್ನು ತಯಾರಿಸುವ ಆಶ್ವಾಸನೆ, ಸ್ವಸಹಾಯ ಗುಂಪುಗಳಿಗೆ ಸಿಕ್ಕಿರುವ ಅನುದಾನ ಸೇರಿದಂತೆ ಕರಾವಳಿಗೆ ಮತ್ತು ದಕ್ಷಿಣ ಕನ್ನಡದ ಜಿಲ್ಲೆಗೆ ಬಜೆಟ್ ನಲ್ಲಿ ಬಂಪರ್ ಕೊಡುಗೆಗಳನ್ನು ನೀಡಲಾಗಿದೆ. ಕರಾವಳಿಯ ಜನರ ಪರವಾಗಿ ಸರ್ಕಾರ ಮತ್ತು ಮುಖ್ಯಮಂತ್ರಿಗಳಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.