ಮಂಗಳೂರು: ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ, ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಹಾಗೂ ಜಿಲ್ಲಾಡಳಿತದ ಸಹಯೋಗದಲ್ಲಿ ಇದೇ ಜು.29ರ ಶುಕ್ರವಾರ ಮಂಗಳೂರು ತಾಲೂಕಿನ ಬಾಳ ಗ್ರಾಮದಲ್ಲಿರುವ ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ನಲ್ಲಿ ರಾಜ್ಯಮಟ್ಟದ ರಾಸಾಯನಿಕ (ಅನಿಲ ಸೋರಿಕೆ) ವಿಪತ್ತುಗಳ ಅಣಕು ಪ್ರದರ್ಶನ ಮತ್ತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ತಿಳಿಸಿದರು.
ಅವರು ಬುಧವಾರ ನಗರದ ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಕೊಠಡಿಯಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಅನಿಲ ಸೋರಿಕೆಯಾದ ಸಂದರ್ಭದಲ್ಲಿ ಜು.29ರ ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆಯ ಅಣಕು ಕಾರ್ಯಾಚರಣೆ ನಡೆಯಲಿದೆ, ಅದಕ್ಕೆ ಪೂರ್ವಭಾವಿಯಾಗಿ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ನಡೆದಿದ್ದು, ಜು.29ರಂದು ಎಂ.ಆರ್.ಪಿ.ಎಲ್ ಆವರಣ ಹಾಗೂ ಆವರಣದ ಹೊರ ಭಾಗದಲ್ಲಿ ಅಣಕು ಕಾರ್ಯಾಚರಣೆ ನಡೆಯಲಿದೆ, ಅದಕ್ಕಾಗಿ ನೋಡಲ್ ಅಧಿಕಾರಿ ಹಾಗೂ ವೀಕ್ಷಕರನ್ನು ನಿಯೋಜಿಸಲಾಗಿದ್ದು, ಪ್ರತಿಯೊಬ್ಬರೂ ಅವರವರ ಜವಾಬ್ದಾರಿಯನ್ನು ನಿಭಾಯಿಸಲಿದ್ದಾರೆ ಎಂದರು.
ಈ ಅಣಕು ಕಾರ್ಯಾಚರಣೆಯಲ್ಲಿ ಅಧಿಕಾರಿಗಳು, ಹೋಂ ಗಾರ್ಡ್ನವರು ಭಾಗವಹಿಸಲಿದ್ದಾರೆ, ಈ ವೇಳೆ ಬಾಳ, ಕಳವಾರ ಹಾಗೂ ಮಂಗಳಪೇಟೆಯಲ್ಲಿ 500ಕ್ಕೂ ಹೆಚ್ಚಿನ ಗ್ರಾಮಸ್ಥರನ್ನು ತೆರವು ಮಾಡಿ ಅವರನ್ನು ಈಗಾಗಲೇ ಗುರುತಿಸಲಾಗಿರುವ ಹೊಸಬೆಟ್ಟು ಹಾಗೂ ವೆಂಕಟರಮಣ ದೇವಸ್ಥಾನದ ಹತ್ತಿರ ಸ್ಥಾಪಿಸಲಾಗುವ ಪುರ್ನವಸತಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗುವುದು ಎಂದು ತಿಳಿಸಿದರು.
ಈ ಅಣಕು ಕಾರ್ಯಾಚರಣೆ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಜು.29ರ ಬೆಳಿಗ್ಗೆ 10.30-11.30ರ ವರೆಗೆ ಸುರತ್ಕಲ್ನಿಂದ ಬಾಳಕ್ಕೆ ಸಂಚರಿಸುವ ರಾಜ್ಯ ಹೆದ್ದಾರಿಯನ್ನು ಬಂದ್ ಮಾಡಲಾಗುವುದು, ಸಾರ್ವಜನಿಕರು ಸಹಕರಿಸುವಂತೆ ಕೋರಿದ ಅವರು, ಈಗಾಗಲೇ ಸ್ಥಳೀಯ ಜನರಿಗೆ ಅಣಕು ಕಾರ್ಯಾಚರಣೆ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದರು.
ಮಂಗಳೂರು ಮಹಾನಗರ ಪಾಲಿಕೆಯ ಉಪ ಆಯುಕ್ತ (ಆಡಳಿತ) ರವಿ ಕುಮಾರ್ ಗೋಷ್ಠಿಯಲ್ಲಿದ್ದರು.