ನವದೆಹಲಿ: ಭಾರತಕ್ಕೆ ಬಂದು ಆಶ್ರಯ ಪಡೆದಿರುವ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಕುರಿತು ವಿದೇಶಾಂಗ ಸಚಿವ ಎಸ್ ಜೈಶಂಕರ್ ಸರ್ವಪಕ್ಷಗಳ ಸಭೆ ಕರೆದಿದ್ದರು. ಶೇಖ್ ಹಸೀನಾ ಮೊದಲು ಚೇತರಿಸಿಕೊಳ್ಳಲಿ ಒಂದೆಡೆ ನೆಲೆಯೂರಲಿ ಬಳಿಕ ಈ ವಿಚಾರದ ಕುರಿತು ಅವರ ಬಳಿ ಮಾತನಾಡೋಣ ಎಂದು ಜೈಶಂಕರ್ ಹೇಳಿದ್ದಾರೆ.
ಸರ್ಕಾರ ಕಾದು ನೋಡುವ ಕ್ರಮದಲ್ಲಿದೆ, ಆದರೆ ಬಾಂಗ್ಲಾದೇಶದ ಸೇನೆಯೊಂದಿಗೆ ಸಂಪರ್ಕದಲ್ಲಿದೆ. ಶೇಖ್ ಹಸೀನಾ ಭಾರತಕ್ಕೆ ಬಂದಿರುವ ವಿಚಾರವನ್ನು ವಿದೇಶಾಂಗ ವ್ಯಹಾರಗಳ ಸಚಿವಾಲಯ ಸೂಕ್ಷ್ಮವಾಗಿ ಗಮನಿಸುತ್ತಿದೆ. ಬಾಂಗ್ಲಾದೇಶದಲ್ಲಿರುವ ರಾಯಭಾರಿ ಅಧಿಕಾರಿಗಳು ಮತ್ತು ಭಾರತೀಯ ಪ್ರಜೆಗಳ ಸುರಕ್ಷತೆಗೆ ಕೇಂದ್ರ ಸರ್ಕಾರ ಆದ್ಯತೆ ನೀಡುತ್ತಿದೆ ಎಂದು ಸಚಿವರು ಹೇಳಿದರು.
ಆದರೆ, ಪರಿಸ್ಥಿತಿಯು ಸ್ಥಳಾಂತರಿಸುವಷ್ಟು ಕೆಟ್ಟದ್ದಲ್ಲ ಆದರೆ ಎಚ್ಚರಿಕೆಯನ್ನು ತೆಗೆದುಕೊಳ್ಳುವಷ್ಟು ಆತಂಕಕಾರಿಯಾಗಿದೆ ಎಂದು ಅವರು ಹೇಳಿದರು. ಬಾಂಗ್ಲಾದೇಶದಲ್ಲಿ ಕನಿಷ್ಠ 20 ಸಾವಿರ ಮಂದಿ ಭಾರತೀಯರಿದ್ದಾರೆ. ಅವರಲ್ಲಿ 8 ಸಾವಿರ ಮಂದಿ ಹಿಂದಿರುಗಿದ್ದಾರೆ ಎಂದರು.