ಅಂಕಾರ: ಫೆಲೆಸ್ತೀನ್ ಮೇಲೆ ಇಸ್ರೇಲ್ ನಡೆಸಿರುವ ನಿರಂತರ ದಾಳಿಯ ವಿರುದ್ಧ ಜಗತ್ತಿನ ಇಸ್ಲಾಮಿಕ್ ದೇಶಗಳೆಲ್ಲ ಒಂದಾಗಿ ಎದ್ದು ನಿಲ್ಲಬೇಕಾಗಿದೆ ಎಂದು ಟರ್ಕಿಯ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ದೊಗಾನ್ ಹೇಳಿದರು.
ಎರ್ದೊಗಾನ್ ಮತ್ತು ಇಬ್ರಾಹಿಂ ರೈಸಿ ಅವರು ಫೋನ್ ಮೂಲಕ ಮಾತನಾಡಿ ಟರ್ಕಿ ಮತ್ತು ಇರಾನ್ ಸಂಬಂಧದ ಬಗ್ಗೆ ಚರ್ಚೆ ಮಾಡಿದರು.
ಈ ಸಂದರ್ಭದಲ್ಲಿ ಪೂರ್ವ ಜೆರುಸಲೇಮಿನ ಇಸ್ರೇಲ್ ಆಕ್ರಮಿತ ಪ್ರದೇಶದಲ್ಲಿನ ಅಲ್ ಅಕ್ಸಾ ಮಸೀದಿಯ ಮೇಲೆ ದಾಳಿ ಮೊದಲಾದವನ್ನು ಪ್ರಸ್ತಾಪಿಸಿ ಒಗ್ಗಟ್ಟಿನ ಪ್ರತಿಭಟನೆ ಅಗತ್ಯ ಎಂದು ಟರ್ಕಿ ಅಧ್ಯಕ್ಷರು ಹೇಳಿದರೆಂದು ಟರ್ಕಿಯ ಸಂಪರ್ಕ ನಿರ್ದೇಶನಾಲಯ ಸುದ್ದಿ ಬಿಡುಗಡೆ ಮಾಡಿದೆ.
ಸರಣಿ ದಾಳಿ ಹಿಂಸಾಚಾರದ ವಿರುದ್ಧ ಸಮಾನ ಮನಸ್ಸಿನ ಒಗ್ಗಟ್ಟು ಪ್ರದರ್ಶಿಸಬೇಕು, ಬಾಧಿತರಿಗೆ ಒಗ್ಗಟ್ಟಿನ ನೆರವು ಕೂಟದ ಎಲ್ಲರಿಗೂ ಲಾಭಕರ ಎಂದು ಎರ್ದೊಗಾನ್ ಹೇಳಿದ್ದಾರೆ.
ಒಐಸಿ- ಇಸ್ಲಾಮಿಕ್ ಸಹಕಾರ ಒಕ್ಕೂಟದ ದೇಶಗಳು, ವಿಶ್ವ ಸಂಸ್ಥೆಯ ಸಹಮತದ ದೇಶಗಳನ್ನು ಕಟ್ಟಿಕೊಂಡು ಒಗ್ಗಟ್ಟಿನಿಂದ ಇಸ್ರೇಲಿನಲ್ಲಿ ಪವಿತ್ರ ಸ್ಥಳಗಳ ಮೇಲೆ ನಡೆಯುವ ದಾಳಿಯನ್ನು ತಡೆಯಬೇಕಾಗಿದೆ. ಯೂರೋಪಿನ ಕೆಲವೆಡೆ ಕುರ್ ಆನ್ ಪ್ರತಿ ಸುಟ್ಟ ಘಟನೆ ನಡೆದಿರುವ ಈ ಕಾಲ ಘಟ್ಟದಲ್ಲಿ ಒಗ್ಗಟ್ಟು ಪ್ರದರ್ಶಿಸಬೇಕಾದುದು ನಮ್ಮ ಕರ್ತವ್ಯ ಎಂದು ಎರ್ದೊಗಾನ್ ಹೇಳಿದರು.