ಜಮ್ಮು: ಕಾಶ್ಮೀರಿ ಪಂಡಿತರ ಸಂಘಟನೆಗಳಲ್ಲಿ ಒಂದಾಗಿರುವ ಆಲ್ ಇಂಡಿಯಾ ಕಾಶ್ಮೀರಿ ಹಿಂದೂ ಫೋರಂ ಶನಿವಾರ ಕಾಂಗ್ರೆಸ್ ನೊಂದಿಗೆ ವಿಲೀನವಾಗಿದೆ.
ಜಮ್ಮುವಿನ ಪಕ್ಷದ ಪ್ರಧಾನ ಕಚೇರಿಯಲ್ಲಿ ಜಮ್ಮು ಮತ್ತು ಕಾಶ್ಮೀರ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ವಿಕಾರ್ ರಸೂಲ್ ವಾನಿ ಆಲ್ ಇಂಡಿಯಾ ಕಾಶ್ಮೀರಿ ಹಿಂದೂ ಫೋರಂ ಅಧ್ಯಕ್ಷ ರತ್ತನ್ ಲಾಲ್ ಭಾನ್ ಮತ್ತಿತರ ಪದಾಧಿಕಾರಿಗಳನ್ನು ಪಕ್ಷಕ್ಕೆ ಬರಮಾಡಿಕೊಂಡರು.
ಆಲ್ ಇಂಡಿಯಾ ಕಾಶ್ಮೀರಿ ಹಿಂದೂ ಫೋರಂ (ಎಐಕೆಎಚ್‌ಎಫ್) 1998ರಲ್ಲಿ ಸ್ಥಾಪನೆಯಾಗಿತ್ತು. ಈ ಸಂಘಟನೆಯ ನೂರಾರು ಜನರು ಕಾಂಗ್ರೆಸ್‌ಗೆ ಸೇರಿರುವುದರಿಂದ ಪಕ್ಷಕ್ಕೆ ಬಲ ಬಂದಂತಾಗಿದೆ ಎಂದು ವಾನಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಎಲ್ಲಾ ಕಾಶ್ಮೀರಿ ಪಂಡಿತರ ಸಂಘಟನೆಗಳು ಪಕ್ಷಕ್ಕೆ ಸೇರುವಂತೆ ಕರೆ ನೀಡಿದ ಅವರು, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಕಳೆದ 10 ವರ್ಷಗಳಿಂದ ಸಮುದಾಯವನ್ನು ಮೂರ್ಖರನ್ನಾಗಿ ಮಾಡಿದೆ ಎಂದು ಹೇಳಿದರು.
ಬಿಜೆಪಿ ಅಧಿಕಾರಕ್ಕೆ ಬರಲು ಕಾಶ್ಮೀರಿ ಪಂಡಿತರ ದುರವಸ್ಥೆಯನ್ನು ದೇಶಾದ್ಯಂತ ಮಾರಾಟ ಮಾಡಿತು ಹಾಗೂ ಪುನರ್ವಸತಿ ಕಲ್ಪಿಸುವುದಾಗಿ ಕಾಶ್ಮೀರಿ ಪಂಡಿತರಿಗೆ ಭರವಸೆ ನೀಡಿತು. ಬಿಜೆಪಿ ಕಳೆದ 10 ವರ್ಷಗಳಿಂದ ಅಧಿಕಾರಿದಲ್ಲಿದೆ. ಆದರೆ, ಕಾಶ್ಮೀರಿ ಪಂಡಿತರಿಗಾಗಿ 10ಪೈಸೆಯ ಕೆಲಸ ಮಾಡಿಲ್ಲ ಎಂದು ವಾನಿ ಈ ಸಂದರ್ಭ ಹೇಳಿದರು.