ಮಸ್ಜಿದ್ ಕೆಡಹುವ ಬೆದರಿಕೆ: ಪ್ರಮೋದ್ ಮುತಾಲಿಕ್ ವಿರುದ್ಧ ಕಠಿಣ ಕ್ರಮಕ್ಕೆ ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ಆಗ್ರಹ

Prasthutha|

ಗದಗ ಜಿಲ್ಲೆಯ ಐತಿಹಾಸಿಕ ಜುಮ್ಮಾ ಮಸ್ಜಿದನ್ನು ಕೆಡಹುವ ಬಹಿರಂಗ ಬೆದರಿಕೆ ಒಡ್ಡಿದ ಶ್ರೀರಾಮ ಸೇನೆಯ ಮುಖಂಡ ಪ್ರಮೋದ್ ಮುತಾಲಿಕ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ರಾಜ್ಯಾಧ್ಯಕ್ಷ ಮೌಲಾನಾ ಅತೀಕುರ್ ರಹ್ಮಾನ್ ಅಶ್ರಫಿ ಆಗ್ರಹಿಸಿದ್ದಾರೆ.

- Advertisement -

ಕಟ್ಟುಕಥೆಗಳ ಮೂಲಕ ಮಸೀದಿಗಳನ್ನು ವಿವಾದಕ್ಕೊಳಪಡಿಸಿ ಅವುಗಳನ್ನು ಅತಿಕ್ರಮಿಸಿಕೊಳ್ಳುವುದು ಸಂಘಪರಿವಾರದ ಜಾಯಮಾನ. ಶತಮಾನಗಳ ಇತಿಹಾಸ ಹೊಂದಿದ್ದ ಬಾಬರಿ ಮಸ್ಜಿದ್ ಕೂಡ ಇದೇ ಷಡ್ಯಂತ್ರಕ್ಕೆ ಬಲಿಯಾಯಿತು. ಕೋಮುವಾದಿ ಫ್ಯಾಶಿಸ್ಟ್ ಸಂಘಪರಿವಾರವು ಹಿಂದುಗಳನ್ನು ಭಾವನಾತ್ಮಕವಾಗಿ ಪ್ರಚೋದಿಸಲು ಇಂತಹ ಪಿತೂರಿಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ. ಇದೀಗ ಗದಗ ಜಿಲ್ಲೆ ಜುಮ್ಮಾ ಮಸ್ಜಿದ್ ವಿರುದ್ಧ ಪ್ರಚೋದನಾಕಾರಿ ಹೇಳಿಕೆ ನೀಡಿರುವುದು ಕೂಡ ಇದರ ಮುಂದುವರಿದ ಭಾಗವಾಗಿದೆ. ಕೆಲ ದಿನಗಳ ಹಿಂದೆ ಜಿಲ್ಲೆಯ ಸಂಘಪರಿವಾರದ ನಾಯಕನೊಬ್ಬ ಇದೇ ರೀತಿಯ ಪ್ರಚೋದನಾರಿ ಹೇಳಿಕೆ ನೀಡಿದ್ದ. ಪ್ರಮೋದ್ ಮುತಾಲಿಕ್ ಕೆಲ ದಿನಗಳಿಂದ ಮಸ್ಜಿದ್ ಧ್ವನಿವರ್ಧಕಗಳ ಬಗ್ಗೆಯೂ ಅನಗತ್ಯ ವಿವಾದವನ್ನು ಸೃಷ್ಟಿಸುತ್ತಿದ್ದಾರೆ. ಇಷ್ಟೆಲ್ಲಾ ಬೆಳವಣಿಗೆಗಳು ನಡೆಯುತ್ತಿದ್ದರೂ ಪೊಲೀಸ್ ಇಲಾಖೆ ಆತನ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೇ ಮೂಕ ಪ್ರೇಕ್ಷಕವಾಗಿ ನೋಡುತ್ತಾ ನಿಂತಿದೆ.

ಸಮಾಜದ ಸ್ವಾಸ್ಥ್ಯ ಕೆಡಿಸುವ ಇಂತಹ ಕಿಡಿಗೇಡಿತನಕ್ಕೆ ಕಡಿವಾಣ ಹಾಕಬೇಕು. ಕೋಮು ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡಿ ಗಲಭೆಗೆ ಸಂಚು ರೂಪಿಸುತ್ತಿರುವ ಮುತಾಲಿಕ್ ಸಹಿತ ಸಂಘಪರಿವಾರದ ನಾಯಕರ ಮೇಲೆ ಗಂಭೀರ ಪ್ರಕರಣ ದಾಖಲಿಸಿ ಬಂಧಿಸಬೇಕು. ಜಿಲ್ಲೆಯ ಸೌಹಾರ್ದ ವಾತಾವರಣ ಕಾಪಾಡಿಕೊಂಡು ಜನರ ನೆಮ್ಮದಿಯ ಬದುಕಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ಕೂಡಲೇ ಕಾರ್ಯಪ್ರವೃತ್ತರಾಗಬೇಕೆಂದು ಮೌಲಾನಾ ಅತೀಕುರ್ ರಹ್ಮಾನ್ ಅಶ್ರಫಿ ಒತ್ತಾಯಿಸಿದ್ದಾರೆ. ಹಾಗೆಯೇ ಧಾರ್ಮಿಕ ವಿಚಾರಗಳನ್ನು ವಿವಾದಕ್ಕೊಳಪಡಿಸಿ ಮುಸ್ಲಿಮ್ ಸಮುದಾಯದ ವಿರುದ್ದ ದ್ವೇಷ ಸಾಧಿಸುವ ಇಂತಹ ಷಡ್ಯಂತ್ರಗಳನ್ನು ವಿಫಲಗೊಳಿಸಲು ಉಲಮಾ ಸಮುದಾಯವು ಧ್ವನಿ ಎತ್ತಬೇಕೆಂದು ಅವರು ಕರೆ ನೀಡಿದ್ದಾರೆ.



Join Whatsapp