ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ ನ ಉಪಾಧ್ಯಕ್ಷರಾಗಿ ಶಾಸಕ ಎನ್.ಎ. ಹ್ಯಾರಿಸ್ ಆಯ್ಕೆ

Prasthutha|

ನವದೆಹಲಿ: ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌ ನ (ಎಐಎಫ್‌ ಎಫ್‌) ನೂತನ ಅಧ್ಯಕ್ಷರಾಗಿ ಮಾಜಿ ಗೋಲ್‌ ಕೀಪರ್‌ ಕಲ್ಯಾಣ್‌ ಚೌಬೆ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಶಾಸಕ ಎನ್.ಎ.ಹ್ಯಾರಿಸ್ ಆಯ್ಕೆಯಾಗಿದ್ದಾರೆ.

- Advertisement -

ಶುಕ್ರವಾರ ನಡೆದ ಚುನಾವಣೆಯಲ್ಲಿ ಚೌಬೆ, ಭಾರತ ಫುಟ್ಬಾಲ್‌ ತಂಡದ ಮಾಜಿ ನಾಯಕ ಬೈಚುಂಗ್ ಭುಟಿಯಾರನ್ನು ಸೋಲಿಸಿದ್ದಾರೆ. ಈ ಮೂಲಕ ಎಐಎಫ್‌ ಎಫ್‌ ನ 85 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಾಜಿ ಆಟಗಾರರೊಬ್ಬರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಚಲಾವಣೆಗೊಂಡ ಒಟ್ಟು 34 ಮತಗಳಲ್ಲಿ ಕಲ್ಯಾಣ್‌ ಚೌಬೆ 33 ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾದರೆ, ಭಾರತ ಫುಟ್ಬಾಲ್‌ ಕಂಡ ಶ್ರೇಷ್ಠ ಆಟಗಾರ ಬೈಚುಂಗ್ ಭುಟಿಯಾ ಕೇವಲ ಒಂದು ಮತವನ್ನಷ್ಟೇ ಪಡೆಯುವ ಮೂಲಕ ನಿರಾಸೆ ಅನುಭವಿಸಿದರು. ವಿಶೇಷವೆಂದರೆ ತನ್ನದೇ ರಾಜ್ಯದ ಪ್ರತಿನಿಧಿಯ ಮತವನ್ನು ಪಡೆಯುವಲ್ಲೂ ಭುಟಿಯಾ ವಿಫಲರಾಗಿದ್ದಾರೆ.

- Advertisement -

ಕರ್ನಾಟಕ ಫುಟ್ಬಾಲ್ ಅಸೋಸಿಯೇಷನ್ ಅಧ್ಯಕ್ಷ,  ಬೆಂಗಳೂರಿನ ಶಾಂತಿನಗರ ವಿಧಾನಸಭಾ ಕ್ಷೇತ್ರದ ಶಾಸಕ ಎನ್‌.ಎ. ಹಾರಿಸ್‌, ಎಐಎಫ್‌ ಎಫ್‌ ನ ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಏಕೈಕ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಹಾರಿಸ್‌,  ರಾಜಸ್ಥಾನ ಫುಟ್ಬಾಲ್ ಅಸೋಸಿಯೇಷನ್‌ನ ಮಾನವೇಂದ್ರ ಸಿಂಗ್ ಅವರನ್ನು ಸೋಲಿಸಿದ್ದಾರೆ..

ಅರುಣಾಚಲ ಪ್ರದೇಶದ ಕಿಪಾ ಅಜಯ್, ಆಂಧ್ರಪ್ರದೇಶದ ಗೋಪಾಲಕೃಷ್ಣ ಕೊಸರಾಜು ಅವರನ್ನು ಸೋಲಿಸುವ ಮೂಲಕ ಖಜಾಂಚಿಯಾಗಿ ಆಯ್ಕೆಯಾದರು.

ಎಐಎಫ್‌ಎಫ್‌ ಅಧ್ಯಕ್ಷ ಸ್ಥಾನಕ್ಕೆ ಭಾರತ ತಂಡದ ಮಾಜಿ ನಾಯಕ ಬೈಚುಂಗ್ ಭುಟಿಯಾ ಮತ್ತು ಮೋಹನ್‌ ಬಾಗನ್‌ ಹಾಗೂ ಈಸ್ಟ್‌ ಬೆಂಗಾಲ್‌ ತಂಡಗಳ ಮಾಜಿ ಗೋಲ್‌ಕೀಪರ್‌ ಕಲ್ಯಾಣ್‌ ಚೌಬೆ ನಡುವೆ ನೇರ ಸ್ಪರ್ಧೆ ಏರ್ಪಟ್ಟಿತ್ತು. ಆದರೆ ಮತದಾನಕ್ಕೆ ಅರ್ಹರಾಗಿದ್ದ 34 ರಾಜ್ಯ ಸಂಘದ ಪ್ರತಿನಿಧಿಗಳಲ್ಲಿ ಹೆಚ್ಚಿನವರ ಬೆಂಬಲ ಪಡೆಯುವಲ್ಲಿ ಭುಟಿಯಾ ವಿಫಲರಾಗಿದ್ದರು. ಮತ್ತೊಂದೆಡೆ ಕಲ್ಯಾಣ್‌ ಚೌಬೆ, ಗುಜರಾತ್‌ ಮತ್ತು ಅರುಣಾಚಲ ಪ್ರದೇಶ ಫುಟ್‌ಬಾಲ್‌ ಸಂಸ್ಥೆಗಳ ಬೆಂಬಲದೊಂದಿಗೆ ಕಣಕ್ಕಿಳಿದಿದ್ದರು. ಒಂದು ಹಂತದಲ್ಲಿ ಚೌಬೆ, ಅವಿರೋಧವಾಗಿ ಆಯ್ಕೆಯಾಗುತ್ತಾರೆ ಎಂದು ಭಾವಿಸಲಾಗಿತ್ತು. ಆದರೆ ಭುಟಿಯಾ ಕಣಕ್ಕಿಳಿದ ಕಾರಣ ಚುನಾವಣೆ ನಡೆದಿತ್ತು.

45 ವರ್ಷದ ಕಲ್ಯಾಣ್‌ ಚೌಬೆ, ಮೋಹನ್ ಬಗಾನ್ ಮತ್ತು ಈಸ್ಟ್ ಬೆಂಗಾಲ್‌ನ ಮಾಜಿ ಗೋಲ್‌ಕೀಪರ್‌ ಆಗಿದ್ದರು. ಚೌಬೆ ಮತ್ತು ಭುಟಿಯಾ ಈಸ್ಟ್ ಬೆಂಗಾಲ್‌ ತಂಡದಲ್ಲಿ ಹಲವು ವರ್ಷಗಳ ಒಟ್ಟಾಗಿ ಆಡಿದ್ದರು. ಭಾರತದ ರಾಷ್ಟ್ರೀಯ ಫುಟ್ಬಾಲ್‌ ತಂಡಕ್ಕೆ ಆಯ್ಕೆಯಾಗಿದ್ದರೂ ಸಹ, ಒಮ್ಮೆಯೂ ಆಡುವ ಹನ್ನೊಂದರ ಬಳಗದಲ್ಲಿ ಚೌಬೆ ಸ್ಥಾನ ಪಡೆದಿರಲಿಲ್ಲ.

ಕಳೆದ ಲೋಕಸಭಾ ಚುನಾವಣೆಯ ವೇಳೆ ಬಿಜೆಪಿ ಸೇರಿದ್ದ ಚೌಬೆ, ಪಶ್ಚಿಮ ಬಂಗಾಳದ ಕೃಷ್ಣನಗರ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಅನುಭವಿಸಿದ್ದರು.

Join Whatsapp