ಮೇಘಾಲಯದಲ್ಲಿ 17ರಿಂದ ಶೂನ್ಯಕ್ಕೆ ತಲುಪಿದ ಕಾಂಗ್ರೆಸ್ ಶಾಸಕರ ಸಂಖ್ಯೆ! ಉಳಿದಿದ್ದ ಐವರು ಶಾಸಕರು ಬಿಜೆಪಿ ಸೇರ್ಪಡೆ

Prasthutha|

ಮೇಘಾಲಯ; ಪಂಚರಾಜ್ಯಗಳಲ್ಲಿ ಚುನಾವಣಾ ಕಣ ದಿನದಿಂದ ದಿನಕ್ಕೆ ಕಾವೇರುತ್ತಿರುವ ನಡುವೆಯೇ, ಮುಂದಿನ ವರ್ಷ ಚುನಾವಣೆ ನಡೆಯಲಿರುವ ಮೇಘಾಲಯದಲ್ಲೂ ರಾಜಕೀಯ ಚಟುವಟಿಕೆಗಳು ಬಿರುಸಾಗಿದೆ.
ಮೇಘಾಲಯದಲ್ಲಿ ಕಾಂಗ್ರೆಸ್ ಶಾಸಕರ ಪಕ್ಷಾಂತರ ಪರ್ವ ಮುಂದುವರಿದಿದ್ದು ಐವರು ಶಾಸಕರು, ರಾಜ್ಯದಲ್ಲಿ ನ್ಯಾಷನಲ್ ಪೀಪಲ್ಸ್ ಪಾರ್ಟಿ ಎನ್‌ಪಿಪಿ ನೇತೃತ್ವದ ಮೆಘಾಲಯ ಡೆಮಾಕ್ರಟಿಕ್ ಅಲೈಯನ್ಸ್ ಎಂಡಿಎ ಸರ್ಕಾರಕ್ಕೆ ಸೇರುವ ನಿರ್ಧಾರವನ್ನು ಮುಖ್ಯಮಂತ್ರಿ ಕೊನ್ರಾಡ್ ಸಂಗ್ಮಾ ಅವರಿಗೆ ಪತ್ರ ಬರೆದು ತಿಳಿಸಿದ್ದಾರೆ.
ಕಾಂಗ್ರೆಸ್ ಶಾಸಕರಾದ ಎಂ ಅಂಪಾರೀನ್ ಲಿಂಗ್ಡೋ, ಮೈರಾಲ್‌ಬೋರ್ನ್ ಸೈಯೆಮ್, ಮೊಹೆಂದ್ರೋ ರಾಪ್ಸಾಂಗ್, ಕಿಮ್ಫಾ ಮಾರ್ಬನಿಯಾಂಗ್ ಮತ್ತು ಪಿಟಿ ಸಾಕ್ಮಿ ಸಿಎಂ ಕೋನ್ರಾಡ್ ಸಂಗ್ಮಾ ಸರ್ಕಾರಕ್ಕೆ ಬೆಂಬಲ ನೀಡಿದ್ದಾರೆ.

- Advertisement -

ಬಿಜೆಪಿ ಕೂಡ ಆಡಳಿತಾರೂಢ ಎಂಡಿಎ ಸರ್ಕಾರದ ಭಾಗವಾಗಿದೆ. ಕಾಂಗ್ರೆಸ್ ಶಾಸಕರ ಸೇರ್ಪಡೆಯೊಂದಿಗೆ, ಕಾಂಗ್ರೆಸ್ ಮತ್ತು ಬಿಜೆಪಿ ಎರಡನ್ನೂ ಒಂದೇ ಸರ್ಕಾರದ ಭಾಗವಾಗಿಸುವ ವಿಶಿಷ್ಟ ಸಾಧನೆಯನ್ನು ಕೋನ್ರಾಡ್ ಸಂಗ್ಮಾ ಮಾಡಿದ್ದಾರೆ.

2021 ನವೆಂಬರ್‌ನಲ್ಲಿ ಮೇಘಾಲಯದಲ್ಲಿ ಕಾಂಗ್ರೆಸ್​ನ ಮಾಜಿ ಮುಖ್ಯಮಂತ್ರಿ ಮುಕುಲ್​ ಸಂಗ್ಮಾ ಸೇರಿ 12 ಶಾಸಕರು ತೃಣಮೂಲ ಕಾಂಗ್ರೆಸ್​ ಸೇರುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಆಘಾತವನ್ನುಂಟು ಮಾಡಿದ್ದರು. ಶಾಸಕಾಂಗ ಪಕ್ಷದ ನಾಯಕರಾಗಿದ್ದ ಸಂಗ್ಮಾ, ಮೇಘಾಲಯ ಪ್ರದೇಶ ಕಾಂಗ್ರೆಸ್​ ಸಮಿತಿ ಮುಖ್ಯಸ್ಥ ವಿನ್ಸೆಂಟ್​ ಎಚ್​.ಪಾಲಾ ಜೊತೆಗಿನ ಹೊಂದಾಣಿಕೆಯ ಕೊರತೆಯಿಂದಾಗಿ ತಮ್ಮ ಬೆಂಬಲಿಗರೊಂದಿಗೆ ಸಂಗ್ಮಾ ಟಿಎಂಸಿ ಕೈಹಿಡಿದಿದ್ದರು.

- Advertisement -

ಮೇಘಾಲಯ ವಿಧಾನಸಭೆಯಲ್ಲಿ 17 ಶಾಸಕ ಬಲದೊಂದಿಗೆ ಪ್ರಮುಖ ಪ್ರತಿಪಕ್ಷವಾಗಿದ್ದ ಕಾಂಗ್ರೆಸ್ ಪಕ್ಷದ ಸದಸ್ಯ ಬಲ ಇದೀಗ ಶೂನ್ಯಕ್ಕೆ ತಲುಪೂವುದರೊಂದಿಗೆ ರಾಜ್ಯದಲ್ಲಿ ಪಕ್ಷದ ಸ್ಥಿತಿ ಶೋಚನೀಯವಾಗಿದೆ.

Join Whatsapp