ಪ್ರವೀಣ್ ಹತ್ಯೆಯ ಪ್ರಮುಖ ಆರೋಪಿಗಳ ಸಂಪೂರ್ಣ ಮಾಹಿತಿ ಲಭ್ಯ: ಎಡಿಜಿಪಿ ಅಲೋಕ್ ಕುಮಾರ್

Prasthutha|

ಮಂಗಳೂರು: ಬಿಜೆಪಿ ಮುಖಂಡ ಪ್ರವೀಣ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳ ಬಂಧನಕ್ಕೆ ಸಂಬಂಧಿಸಿದಂತೆ ಸಭೆ ಮಾಡಲಿದ್ದೇವೆ. ಮಂಡ್ಯ, ಚಾಮರಾಜನಗರ, ಹಾಸನ, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ ಎಸ್ಪಿಗಳ ಜೊತೆ ಸಭೆ ಮಾಡುತ್ತೇವೆ. ಮಂಗಳೂರಿನ ಕಾನೂನು ಸುವ್ಯವಸ್ಥೆ ಬಗ್ಗೆಯೂ ಸಭೆ ಮಾಡುತ್ತೇವೆ ಎಂದು ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ.

- Advertisement -

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳ್ಳಾರೆ ಪ್ರವೀಣ್ ಕೊಲೆ ಕೇಸ್ ನಲ್ಲಿ ಮುಖ್ಯ ಆರೋಪಿಗಳ ಬಂಧನ ಇನ್ನಷ್ಟೇ ಆಗಬೇಕಿದ್ದು, ಆರು ಜಿಲ್ಲೆಯ ಎಸ್ಪಿ, ಎನ್ ಐ ಎ ಅಧಿಕಾರಿಗಳೊಂದಿಗೆ ಈ ಸಭೆ ನಡೆಯಲಿದೆ ಎಂದು ಹೇಳಿದರು.

ಆರೋಪಿಗಳ ದಸ್ತಗಿರಿಗೆ ಬೇರೆ ಬೇರೆ ಜಿಲ್ಲೆಯ ಅಧಿಕಾರಿಗಳ ಸಭೆ ಮಾಡುತ್ತೇವೆ. ಎನ್ ಐ ಎ ಅಧಿಕಾರಿಗಳ‌ ಜೊತೆ ಸೇರಿ ಕ್ರಮ ಜರುಗಿಸುತ್ತೇವೆ. ಪ್ರವೀಣ್ ಹತ್ಯೆಯ ಪ್ರಮುಖ ಆರೋಪಿಗಳ ಸಂಪೂರ್ಣ ಮಾಹಿತಿ ಇದೆ. ಅವರ ಫೋಟೋ,ಮನೆ ವಿಳಾಸ,ತಂದೆ-ತಾಯಿ,ಹೆಂಡತಿ ಮುಂತಾದ ಎಲ್ಲ ಮಾಹಿತಿಗಳೂ ಲಭ್ಯವಿದೆ. ಕೋರ್ಟ್ ಮೂಲಕ ವಾರೆಂಟ್ ನೀಡುವ ಪ್ರಕ್ರಿಯೆ ಜಾರಿಯಲ್ಲಿದೆ. ಆರೋಪಿಗಳ ಆಸ್ತಿ ಮುಟ್ಟುಗೋಲು ಹಾಕುವ ಪ್ರಕ್ರಿಯೆ ಕೂಡ ನಡೆಯುತ್ತಿದೆ ಎಂದು ಹೇಳಿದರು.

- Advertisement -

ಪ್ರಮುಖ ಆರೋಪಿಗಳನ್ನು ಬಚ್ಚಿಡುವ ಕೆಲಸ ನಡೆಯುತ್ತಿದೆ. ಪದೇ ಪದೇ ಅವರ ಸ್ಥಳ ಬದಲಾವಣೆ ಮಾಡಲಾಗುತ್ತಿದ್ದು, ಪೊಲೀಸರ ದಾಳಿ ವೇಳೆ ಪ್ರಮುಖ ಆರೋಪಿಗಳು ಪರಾರಿಯಾಗುತ್ತಿದ್ದಾರೆ. ಮುಖ್ಯ ಆರೋಪಿಗಳಿಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಕಾರ ಮಾಡಿದವರಿಗೂ ಕ್ರಮ ಆಗಲಿದೆ ಎಂದು ಎಚ್ಚರಿಸಿದರು.

ನಾವು ಯಾವುದೇ ದಾಖಲೆ ಇಲ್ಲದೆ ಏನನ್ನೂ ಮಾತನಾಡುವುದಿಲ್ಲ. ದಾಖಲೆ ಸಹಿತ ಮಾತನಾಡುತ್ತೇವೆ. ಹತ್ಯೆ ಬಗ್ಗೆ ತನಿಖೆಯನ್ನು ಮಾಡುತ್ತಿದ್ದೇವೆ. ತನಿಖೆಯ ಬಳಿಕ ಯಾರಿಗೆಲ್ಲಾ ಪಿಎಫ್ ಐ ಜೊತೆ ಸಂಬಂಧ ಇದೆ ಎಂಬುವುದರ ಬಗ್ಗೆ ಹೇಳುತ್ತೇವೆ. ಈಗ ಬಂಧನವಾಗಿರುವ ಏಳು ಮಂದಿಯೂ ಸ್ಥಳೀಯರೇ ಆಗಿದ್ದು, ಪ್ರಕರಣಕ್ಕೆ ಕೇರಳ ಲಿಂಕ್ ಇರುವ ಬಗ್ಗೆ ಹೇಳಲು ಸಾಧ್ಯವಿಲ್ಲ. ಅವರಿಗೆ ನಿರ್ದೇಶನ ಕೊಟ್ಟಿರುವುದು ಯಾರು ಎಂಬುವುದರ ಬಗ್ಗೆ ಕೂಲಂಕಷವಾಗಿ ಪರಿಶೀಲನೆ ಮಾಡುತ್ತೇವೆ ಎಂದು ಹೇಳಿದ್ದಾರೆ.

ದ.ಕ.ಜಿಲ್ಲೆಯಲ್ಲಿ ಶಾಂತಿ, ಸುವ್ಯವಸ್ಥೆ ಮರಳಿ ಬರುತ್ತಿದೆ. ಆದರೂ ಮುಂಜಾಗ್ರತಾ ಕ್ರಮವಾಗಿ ಸೆಕ್ಷನ್ 144ರನ್ವಯ ಆ.14ರ ಮಧ್ಯರಾತ್ರಿ ವರೆಗೆ ನಿಷೇಧಾಜ್ಞೆ ಜಾರಿಯಲ್ಲಿರಲಿದೆ ಎಂದು ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದರು.



Join Whatsapp