► ಉ.ಪ.ದಲ್ಲಿ ಮುಂದುವರಿದ ಹೆಸರು ಬದಲಾವಣೆ ಚಾಳಿ
ಲಕ್ನೋ: ಉತ್ತರ ಪ್ರದೇಶದ ಅಲಿಘಡದ ಹೆಸರನ್ನು ಹರಿಘಡವಾಗಿಯೂ, ಮೈನ್ ಪುರಿಯನ್ನು ಮಾಯನ್ ನಗರವಾಗಿ ಮರು ನಾಮಕರಣ ಮಾಡಲು ಸ್ಥಳೀಯ ಜಿಲ್ಲಾ ಪಂಚಾಯತ್ ತೀರ್ಮಾನ ತೆಗೆದುಕೊಳ್ಳುವ ಮೂಲಕ ಹಳೆಯ ಹೆಸರುಗಳನ್ನು ಬದಲಿಸುವ ಬಿಜೆಪಿ ಚಾಳಿ ಮುಂದುವರಿದಿದೆ.
ಈ ಜಿಲ್ಲಾ ಪಂಚಾಯತುಗಳಲ್ಲಿ ಬಿಜೆಪಿ ಬಹುಮತ ಹೊಂದಿದ್ದು, ಮಂಗಳವಾರ ಈ ತೀರ್ಮಾನ ತೆಗೆದುಕೊಂಡಿದೆ.
ಬ್ರಜ್ ಪ್ರಾಂತ್ ಬಿಜೆಪಿಯ ಅಧ್ಯಕ್ಷ ಶ್ಯೋರಾಜ್ ಸಿಂಗ್ ರ ಪತ್ನಿ ವಿಜಯಾ ಸಿಂಗ್ ಆಲಿಗಡ ಜಿಲ್ಲಾ ಪಂಚಾಯತಿನ ಅಧ್ಯಕ್ಷೆಯಾಗಿದ್ದಾರೆ.
ಮೈನ್ ಪುರಿ ಜಿಲ್ಲಾ ಪಂಚಾಯತಿಯ ಅಧ್ಯಕ್ಷೆ ಅರ್ಚನಾ ಬದೌರಿಯಾ ನಾಯಕತ್ವದಲ್ಲಿ ಹೊಸದಾಗಿ ಆಯ್ಕೆಯಾದ ಬಿಜೆಪಿ ಸದಸ್ಯರು ಇದೇ ಮಾದರಿಯ ತೀರ್ಮಾನ ತೆಗೆದುಕೊಂಡಿದ್ದಾರೆ. ಮಾಯನ್ ಋಷಿಯ ಹೆಸರನ್ನು ಮೈನ್ ಪುರಿಗೆ ಇಡಲು ಕಾರಣವನ್ನು ನೀಡಲಾಗಿದೆ. ಇಲ್ಲಿ ಪ್ರತಿಪಕ್ಷಗಳು ವಿರೋಧ ತೋರಿದರೂ ತೀರ್ಮಾನವು 19- 11 ಮತಗಳಿಂದ ಸ್ವೀಕೃತವಾಯಿತು. ಈ ಹೆಸರು ಬದಲಾವಣೆ ರಾಜಕೀಯವೆಲ್ಲ ಚುನಾವಣೆಗೆ ಮೊದಲು ನಡೆಯುತ್ತಿದೆ ಎನ್ನುವುದು ಗಮನಿಸಬೇಕಾದ ಅಂಶವಾಗಿದೆ.