ಬೆಂಗಳೂರು: ರಾಜ ಅಲೆಕ್ಸಾಂಡರ್ ಭಾರತದ ಮೇಲೆ ದಂಡೆತ್ತಿ ಹೊರಟಾಗ ಅವರ ಗುರುಗಳು, ರಾಮಾಯಣ, ಮಹಾಭಾರತ ಗ್ರಂಥಗಳನ್ನು ತಪ್ಪದೇ ತರುವಂತೆ ಸೂಚಿಸಿದ್ದರು ಎಂದು ಕೆಪಿಸಿಸಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಶನಿವಾರ ನಡೆದ ಮಾಜಿ ಸಚಿವೆ ಮೋಟಮ್ಮ ಅವರ ಆತ್ಮಚರಿತ್ರೆ ‘ಬಿದಿರೆ ನೀನ್ಯಾರಿಗಲ್ಲದವಳು’ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈ ಹಿಂದೆ ಅರಸ ಅಲೆಕ್ಸಾಂಡರ್ ಭಾರತದ ಮೇಲೆ ದಂಡೆತ್ತಿ ಹೊರಟಾಗ ಅವರ ಗುರು, ನೀನು ಭಾರತದಿಂದ ವಾಪಸ್ಸು ಬರುತ್ತಿಯೋ ಇಲ್ಲವೋ ಗೊತ್ತಿಲ್ಲ. ಆದರೆ ನೀನು ವಾಪಸ್ಸು ಬರುವಾಗ 5 ವಸ್ತುಗಳನ್ನು ಮರೆಯದೆ ತೆಗೆದುಕೊಂಡು ಬಾ. ಅವು ರಾಮಾಯಣ, ಮಹಾಭಾರತ ಗ್ರಂಥ, ಗಂಗಾ ಜಲ, ಕೃಷ್ಣನ ಕೊಳಲು ಹಾಗೂ ಒಬ್ಬ ತತ್ವಜ್ಞಾನಿ ಎಂದು ಉಲ್ಲೇಖಿಸಿದ್ದರು ಎಂದರು.
ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿ ಆಗಿದ್ದಾಗ ಹೆಣ್ಣು ಮಕ್ಕಳಿಗೆ ಶಕ್ತಿ ತುಂಬುವ ಯೋಜನೆಯ ಚಿಂತನೆ ಬಂತು. ಈ ಜವಾಬ್ದಾರಿಯನ್ನು ಮೋಟಮ್ಮ ಅವರಿಗೆ ವಹಿಸಲಾಯ್ತು. ಆಗ ಅನುಷ್ಠಾನಕ್ಕೆ ಬಂದ ಸ್ತ್ರೀ ಶಕ್ತಿ ಯೋಜನೆ ಇಂದು ಸಮಾಜದಲ್ಲಿ ಬಹಳ ಆಳವಾಗಿ ಬೇರೂರಿದೆ ಎಂದು ನುಡಿದರು.
ಕೊಳಲು ಬಿದಿರಿನಿಂದ ಮಾಡಿದ್ದು. ಬಿದಿರಿಗೆ ಗೊತ್ತಿರುವುದಿಲ್ಲ. ತಾನು ಕೊಳಲಾಗುತ್ತೇನೆ ಎಂದು, ಕೊಳಲಿಗೂ ಗೊತ್ತಿರುವುದಿಲ್ಲ, ತನ್ನಿಂದ ಇಂಪಾದ ನಾದ ಹೊರಹೊಮ್ಮತ್ತದೆ ಎಂದು, ಆ ನಾದಕ್ಕೂ ಗೊತ್ತಿರುವುದಿಲ್ಲ., ತನ್ನಿಂದ ಜನಕ್ಕೆ ಆನಂದವಾಗುತ್ತದೆ ಎಂದು, ಹಾಗೆ ಮೋಟಮ್ಮನವರಿಗೂ ಗೊತ್ತಿರಲಿಲ್ಲ ಎಂದು ಬಣ್ಣಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಎಸ್.ಎಂ ಕೃಷ್ಣ, ಮಾಜಿ ಉಪಮುಖ್ಯಮಂತ್ರಿ ಪರಮೇಶ್ವರ್, ಮಾಜಿ ಸಚಿವೆ ಬಿ.ಟಿ ಲಲಿತಾ ನಾಯಕ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.