ಚಿಕ್ಕಮಗಳೂರು: ಆಲ್ದೂರು ಸಮೀಪದ ಮಾಚಗೊಂಡನಹಳ್ಳಿಯ ಅಂಬೇಡ್ಕರ್ ರಸ್ತೆ ಸಂಪೂರ್ಣ ಹದಗೆಟ್ಟು ಸಂಚಾರ ದುಸ್ತರವಾಗಿದ್ದು, ರಸ್ತೆಯನ್ನು ಅಭಿವೃದ್ಧಿಪಡಿಸಿ ಸಂಚಾರಕ್ಕೆ ಯೋಗ್ಯವಾಗಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ, ಹಿರಿಯ ಪ್ರಾಥಮಿಕ ಪಾಠಶಾಲೆ, ಸರ್ಕಾರಿ ಪ್ರೌಢಶಾಲೆ, ಪದವಿಪೂರ್ವ ಕಾಲೇಜು, ಪಶು ಆಸ್ಪತ್ರೆಗೆ ಇದೇ ರಸ್ತೆಯ ಮೂಲಕ ಸಂಚರಿಸಬೇಕಿದ್ದು, ಮಳೆಗಾಲದಲ್ಲಿ ಕೆಸರು ಗದ್ದೆಯಂತಾಗುವ ಈ ರಸ್ತೆಯಲ್ಲಿ ಸಂಚರಿಸುವುದು ಕಷ್ಟವಾಗಿದೆ. ರೋಗಿಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು, ಭಾನುವಾರ ನಡೆಯುವ ವಾರದ ಸಂತೆಗೆ ಬರಲು ಜನರು ತೊಂದರೆ ಅನುಭವಿಸುತ್ತಿದ್ದಾರೆ. 250 ಮೀಟರ್ ಉದ್ದವಿರುವ ಈ ರಸ್ತೆ ಹೊಂಡಗಳಿಂದ ತುಂಬಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ.
‘ಎರಡೂವರೆ ದಶಕಗಳಿಂದ ಈ ರಸ್ತೆಯ ಅಭಿವೃದ್ಧಿಯು ಕನಸಾಗಿಯೇ ಉಳಿದಿದೆ.ರಸ್ತೆ ಅಭಿವೃದ್ಧಿಗೆ ಗ್ರಾಮ ಪಂಚಾಯಿತಿ ಅನುದಾನದ ಕೊರತೆ ಇದ್ದು, ಶಾಸಕರಿಗೆ ಮನವಿ ಮಾಡಲಾಗಿದೆ ಎಂದು ಪಿಡಿಒ ಪರಶುರಾಮ್ ಹೇಳಿದರು.