ಬೆಂಗಳೂರು; ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ ಅವರು ಅಧಿಕಾರ ದುರುಪಯೋಗ ಮಾಡಿಕೊಂಡು ತಮ್ಮದೇ ಕುಟುಂಬ ಮತ್ತು ಶಿಕ್ಷಣ ಸಂಸ್ಥೆಗಳಿಗೆ ಕೈಗಾರಿಕೆ ಭೂಮಿಯನ್ನು ಅಕ್ರಮವಾಗಿ ಮಂಜೂರು ಮಾಡಿಸಿಕೊಂಡಿದ್ದು, ಈ ಕುರಿತು ಸಚಿವರ ವಿರುದ್ಧ ಲೋಕಾಯುಕ್ತಕ್ಕೆ ದೂರು ದಾಖಲಾಗಿದೆ.
ಸಾಮಾಜಿಕ ಕಾರ್ಯಕರ್ತ ಎ. ಆಲಂ ಪಾಷ ಅವರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದು, ಸಚಿವ ಮುರುಗೇಶ್ ನಿರಾಣಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಸುದ್ದಿಗಾರರಿಗೆ ಮಾಹಿತಿ ನೀಡಿರುವ ಆಲಂ ಪಾಷ ಅವರು, ಸಚಿವ ಮುರುಗೇಶ್ ನಿರಾಣಿ ಅವರ ಅಕ್ರಮ ಕೃತ್ಯಗಳೆಲ್ಲವನ್ನೂ ಪಟ್ಟಿ ಮಾಡಿ ಅವರ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಪ್ರಕಾರ ಕಾನೂನು ಕ್ರಮಗಳನ್ನು ಆರಂಭಿಸುವಂತೆ ಕೋರಿ ಲೋಕಾಯುಕ್ತ ಎಸ್ಪಿ ಅವರಿಗೆ ದೂರು ಸಲ್ಲಿಸಲಾಗಿದೆ. ಮುಖ್ಯಮಂತ್ರಿ ಬೊಮ್ಮಾಯಿ ಅವರು ಅಕ್ರಮವೆಸಗಿರುವ ಸಚಿವ ಮುರುಗೇಶ್ ನಿರಾಣಿ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಬೇಕು ಎಂದು ಒತ್ತಾಯಿಸಿದರು.
ಸಚಿವ ನಿರಾಣಿ ಅವರ ತವರು ಕ್ಷೇತ್ರದಲ್ಲಿ ರೈತರು ಕೈಗಾರಿಕೆಗಳಿಗೆ ಭೂಮಿ ಕೊಡುವುದಿಲ್ಲ ಎಂದು ಹೋರಾಟ ಮಾಡುತ್ತಿದ್ದಾರೆ. ಹೀಗಿದ್ದರೂ ಆ ಭೂಮಿಯನ್ನು ತೆಗೆದುಕೊಂಡೆ ತೀರುತ್ತೇನೆ ಎಂದು ಸಚಿವರು ದರ್ಪದಿಂದ ವರ್ತಿಸುತ್ತಿದ್ದಾರೆ. ಸಂವಿಧಾನ, ಕಾನೂನು, ನೀತಿ ನಿಯಮಗಳನ್ನು ಗಾಳಿಗೆ ತೂರಿದ್ದಾರೆ ಎಂದು ಆರೋಪಿಸಿದರು.
ರಾಜ್ಯದ ಉದ್ಯಮ ವಲಯ, ಬಡ ವರ್ಗದ ಜನತೆ ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸಚಿವ ನಿರಾಣಿ, ಜನರ ಹಿತಾಸಕ್ತಿಗಳನ್ನು ಬದಿಗಿಟ್ಟು, ತಮ್ಮ ಕುಟುಂಬಕ್ಕೆ ಲಾಭ ವಾಡಿಕೊಳ್ಳುವ ಏಕೈಕ ಉದ್ದೇಶದಿಂದ ಕಾನೂನು ಬಾಹೀರಾವಾಗಿ ಭೂಮಿ ಹಂಚಿಕೆ ಮಾಡಿಸಿಕೊಂಡಿದ್ದಾರೆ. ನಿರಾಣಿ ಕುಟುಂಬಕ್ಕೆ ಸೇರಿರುವ ತೇಜಸ್ ಇಂಟರ್ನ್ಯಾಶನಲ್ ಶಿಕ್ಷಣ ಸಂಸ್ಥೆಗಳಿಗೆ ಮಾಧುರಿ ಮುಧೋಳ ಅವರನ್ನು ನಿರ್ದೇಶಕರನ್ನಾಗಿ ನೇಮಿಸಿಕೊಂಡು ಆ ಸಂಸ್ಥೆಗೆ ಕೈಗಾರಿಕೆಗಳಿಗೆ ಮೀಸಲಾಗಿದ್ದ ಭೂಮಿಯನ್ನು ಅಕ್ರಮವಾಗಿ ಪಡೆಯುವಲ್ಲಿ ಸಚಿವ ಮುರುಗೇಶ್ ನಿರಾಣಿ ಯಶಸ್ವಿಯಾಗಿದ್ದಾರೆ ಎಂದರು.
ನಿರಾಣಿ ಅವರು ಮಂತ್ರಿ ಸ್ಥಾನದ ಅಧಿಕಾರವನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ತಮ್ಮ ಕುಟುಂಬದ ಹಿತಕ್ಕಾಗಿ ರಾಜ್ಯದ ಹಿತವನ್ನು ಬಲಿ ಕೊಡುತ್ತಿರುವ ಸಚಿವ ನಿರಾಣಿ ಅವರ ಸ್ವಾರ್ಥ ಮತ್ತು ಸಮಯ ಸಾಧಕ ಕೃತ್ಯಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಂಬಲ ನೀಡುತ್ತಿರುವುದು ಸರಿಯಲ್ಲ ಎಂದು ಆಲಂ ಪಾಷ ಹೇಳಿದರು