ಬೆಂಗಳೂರು: ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಬ್ ಪಂತ್ ಒಂದು ಪಂದ್ಯದಿಂದ ನಿಷೇಧಕ್ಕೊಳಗಾಗಿದ್ದು ಬದಲಿ ನಾಯಕನನ್ನು ಫ್ರಾಂಚೈಸಿ ಘೋಷಿಸಿದೆ. ಆರ್‌ಸಿಬಿ ವಿರುದ್ಧ ರಿಷಬ್ ಪಂತ್ ಅನುಪಸ್ಥಿತಿಯಲ್ಲಿ ಅಕ್ಷರ್ ಪಟೇಲ್ ತಂಡದ ನಾಯಕತ್ವವನ್ನು ವಹಿಸಲಿದ್ದಾರೆ ಎಂದು ಡೆಲ್ಲಿ ಕ್ಯಾಪಿಟಲ್ಸ್ ಕೋಚ್ ರಿಕಿ ಪಾಂಟಿಂಗ್ ಖಚಿತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಪಂದ್ಯದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಿಕ್ಕಿ ಪಾಂಟಿಂಗ್, ಅಕ್ಸರ್ ಅತ್ಯಂತ ಅನುಭವಿ ಮತ್ತು ಸಂವೇದನಾಶೀಲ ಆಟಗಾರ, ಅವರು ಆಟವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆ. ಆರ್‌ಸಿಬಿ ವಿರುದ್ಧದ ಪಂದ್ಯಕ್ಕೆ ಆಲ್‌ರೌಂಡರ್ ನಾಯಕನ ಪಾತ್ರವನ್ನು ವಹಿಸಿಕೊಳ್ಳಲು ಉತ್ಸುಕನಾಗಿದ್ದಾರೆ ಎಂದು ಹೇಳಿದ್ದಾರೆ.
ಐಪಿಎಲ್ ನಿಯಮವನ್ನು ಸತತವಾಗಿ ಉಲ್ಲಂಘಿಸಿದ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಬ್ ಪಂತ್ ವಿರುದ್ಧ ಬಿಸಿಸಿಐ ಕಠಿಣ ಕ್ರಮ ಕೈಗೊಂಡಿದೆ. ಅದರಂತೆ ನಾಯಕ ರಿಷಬ್ ಪಂತ್ ಒಂದು ಪಂದ್ಯದಿಂದ ನಿಷೇಧಕ್ಕೊಳಗಾಗಿದ್ದಾರೆ. ಇದರಿಂದಾಗಿ ಪಂತ್ ಆರ್‌ಸಿಬಿ ವಿರುದ್ಧದ ಬಹಳ ಮುಖ್ಯವಾದ ಪಂದ್ಯವನ್ನು ಆಡುವಂತಿಲ್ಲ ಎಂದಿದ್ದಾರೆ.
ಭಾನುವಾರ, ಮೇ 12 ರಂದು ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಪಂದ್ಯ ನಡೆಯಲಿದ್ದು, ಇದಕ್ಕೂ ಒಂದು ದಿನ ಮುಂಚಿತವಾಗಿ ಮಂಡಳಿ ಈ ನಿರ್ಧಾರ ಪ್ರಕಟಿಸಿದೆ. ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಐಪಿಎಲ್, ಡೆಲ್ಲಿ ತಂಡ ನಿಧಾನಗತಿಯ ಓವರ್ ನಿಯಮವನ್ನು ಮೂರನೇ ಬಾರಿಗೆ ಉಲ್ಲಂಘಿಸಿದಕ್ಕಾಗಿ ಡೆಲ್ಲಿ ನಾಯಕ ಪಂತ್‌ಗೆ ಈ ಶಿಕ್ಷೆ ವಿಧಿಸಲಾಗಿದೆ ಎಂದು ತಿಳಿಸಿದೆ.